ಚನ್ನಪಟ್ಟಣ, ನ.30(DaijiworldNews/AK): ಉಪ ಚುನಾವಣೆ ಫಲಿತಾಂಶವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ನಾವು ಸೋತಿದ್ದೇವೆಯೇ ಹೊರತು ಸತ್ತಿಲ್ಲ. ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸೋತ ಅಭ್ಯರ್ಥಿನಿಖಿಲ್ ಕುಮಾರಸ್ವಾಮಿ ಹೇಳಿದರು.

ಕೂಡ್ಲೂರಿನಲ್ಲಿ ಶನಿವಾರ ನಡೆದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿ, ಕ್ಷೇತ್ರದ 87 ಸಾವಿರಕ್ಕೂ ಹೆಚ್ಚು ಜನ ಮತ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ಹೋರಾಡೋಣ ಎಂದರು.
ಸಭೆಯಲ್ಲಿ ಉಪಚುನಾವಣೆಯ ಸೋಲಿನ ಹೊಣೆ ಹೊತ್ತು ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಜಯ ಮುತ್ತು ಅವರಿಗೆ ರಾಜೀನಾಮೆ ವಾಪಸ್ ಪಡೆಯುವಂತೆ ಸಲಹೆ ನೀಡಿದ ಅವರು, ಉದ್ವೇ ಗಕ್ಕೆ ಒಳಗಾಗಿ ಜಯಮುತ್ತು ಅವರು ಫಲಿತಾಂಶದ ನೈತಿಕ ಹೊಣೆಹೊರುತ್ತೇನೆ ಅಂದಿದ್ದಾರೆ. ಆದರೆ ಎಲ್ಲರೂ ಸಾಮೂಹಿಕವಾಗಿ ನೈತಿಕ ಹೊಣೆಹೊರಬೇಕು ಎಂದರು.
ಇಡೀ ರಾಜ್ಯ ಸರ್ಕಾರವನ್ನೇ ಎದುರಿಸಿದ್ದೀರಿ. ನಿಮ್ಮ ಪಾದಗಳಿಗೆ ನಮಸ್ಕರಿಸಿ ಕೇಳ್ತೇನೆ ನನ್ನ ಮೇಲೆ ಅನುಮಾನಪಡಬೇಡಿ. ಅನಿರೀಕ್ಷಿತವಾಗಿ ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೆ.ಇತ್ತೀಚಿಗೆ ವಿಧಾನ ಚುನಾವಣೆಯಲ್ಲೂ ಕೆಲವು ಕಾರಣಗಳಿಂದ ಸೋತಿದ್ದೇನೆ. ಬಳಿಕ ಪಕ್ಷದ ಸಂಘಟನೆ ಜವಾಬ್ದಾರಿ ಹೊತ್ತು ರಾಜ್ಯ ಪ್ರವಾಸ ಮಾಡ್ತಿದ್ದೇನೆ. ಆದರೆ ಅನಿರೀಕ್ಷಿತವಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಅನಿವಾರ್ಯ ಆಯಿತು ಎಂದು ತಿಳಿಸಿದರು.