ಬೆಂಗಳೂರು, ಡಿ.01(DaijiworldNews/AA): ಬಿಜೆಪಿ ಕಾರ್ಯಕರ್ತರಿಗೆ ಅವಮಾನ ಆಗುವಂತೆ ಯಾರೂ ನಡೆದುಕೊಳ್ಳದಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಏನೇ ದಾಖಲೆಗಳಿದ್ದರೂ ಒಂದು ಕ್ಷಣವೂ ತಡ ಮಾಡದೆ ಬಿಡುಗಡೆ ಮಾಡಿ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಲ್ಲಿ ವಿನಂತಿ ಮಾಡಿಕೊಂಡ ಅವರು, ಪಕ್ಷಕ್ಕೆ ಅಗೌರವ ಆಗುವಂತೆ ಯಾರೂ ಕೂಡ ಮಾಧ್ಯಮಗಳ ಮುಂದೆ ಮಾತನಾಡಬಾರದು. ನಮ್ಮ ನಡವಳಿಕೆ, ಹೇಳಿಕೆಗಳು ಸಂಘಟನೆಗೆ ಪೂರಕವಾಗಿ ಇರಬೇಕೇ ಹೊರತು ಸಂಘಟನೆಗೆ ತೊಂದರೆ ಕೊಡುವ ಕೆಲಸವನ್ನು ನಾನೂ ಮಾಡಬಾರದು. ಮತ್ತೊಬ್ಬನೂ ಮಾಡಬಾರದು ಎಂದು ತಿಳಿಸಿದರು.
ವಿಜಯೇಂದ್ರ ಬದಲಾವಣೆ ಪ್ರಯತ್ನ ಮಾಡಲಿ. ಇನ್ನೂ ಹೆಚ್ಚು ಜನರನ್ನು ಸೇರಿಸಿಕೊಳ್ಳಲಿ. ಅದರ ಬಗ್ಗೆ ಅಭ್ಯಂತರವಿಲ್ಲ. ರಾಜ್ಯದಲ್ಲಿ ಸಂಘಟನೆ ಯಾವ ದಿಕ್ಕಿನಲ್ಲಿ ಹೋಗಬೇಕೆಂಬ ಬಗ್ಗೆ ಪಕ್ಷದ ವರಿಷ್ಠರಿಗೆ ಸ್ಪಷ್ಟತೆ ಇದೆ. ಅವರ ಅಕ್ಕಪಕ್ಕ ಇರುವವರಿಗೆ ವಿಜಯೇಂದ್ರನ ಬಗ್ಗೆ ಬೇಸರ ಇಲ್ಲ ಎಂದು ಹೇಳಿದರು.
ಚಾಡಿ ಹೇಳುವ ಅವಶ್ಯಕತೆ ನನಗಿಲ್ಲ
ಚಾಡಿ ಹೇಳುವುದಾಗಲೀ, ಯತ್ನಾಳರನ್ನು ಪಕ್ಷದಿಂದ ಹೊರಕ್ಕೆ ಕಳಿಸಬೇಕೆಂಬ ಒತ್ತಾಯ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ. ಕಳೆದ 3-4 ತಿಂಗಳುಗಳಲ್ಲಿ ನಾವು ಆಡಳಿತ ಪಕ್ಷವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿರುದ್ಧ ಹೋರಾಟಗಳಲ್ಲಿ ಮುಖ್ಯಮಂತ್ರಿಗಳನ್ನು ಕಟ್ಟಿ ಹಾಕುವ ಕೆಲಸ ಯಶಸ್ವಿಯಾಗಿ ಮಾಡಿದ್ದೇವೆ. ರಾಜ್ಯದ ಜನರು ಭ್ರಷ್ಟ ಕಾಂಗ್ರೆಸ್ ಸರ್ಕಾರ ಎನ್ನುತ್ತಿದ್ದಾರೆ. ಇದರ ನಡುವೆ, ನಮ್ಮ ಕೆಲವು ಮುಖಂಡರು ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ರಾಜ್ಯ ಕಂಡ ಧೀಮಂತ ನಾಯಕ, ರೈತ ಮುಂದಾಳು ಯಡಿಯೂರಪ್ಪರ ಬಗ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ಇನ್ನೂ ಕೆಲವರು ಯತ್ನಾಳರ ಹೆಗಲ ಮೇಲೆ ಗನ್ ಇಟ್ಟು ಗುಂಡು ಹಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ. ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಆಡಳಿತ ಪಕ್ಷವನ್ನು ಒಗ್ಗಟ್ಟಾಗಿ ಎದುರಿಸಬೇಕಿದೆ ಎಂದು ತಿಳಿಸಿದರು.