ಹುಬ್ಬಳ್ಳಿ, 04 (DaijiworldNews/AK): ‘ನಮ್ಮ ಭೂಮಿ ನಮ್ಮ ಹಕ್ಕು’ ಅಭಿಯಾನದಡಿ ಇಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು.

ಇದೇವೇಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ವಕ್ಫ್ ಕುರಿತ ಗೆಜೆಟ್ ರದ್ದು ಪಡಿಸದೇ ಇದ್ದರೇ ರೈತರಿಗೆ ಜಮೀನು ಸಿಗುವುದಿಲ್ಲ ಎಂದು ವಿವರಿಸಿದರು. ವಕ್ಫ್ ವಿಚಾರದಲ್ಲಿ ಗೊಂದಲ ಆರಂಭವಾಗಿದೆ. ರಾಜ್ಯದಲ್ಲಿ ರೈತರ ಜಮೀನನ್ನು ವಕ್ಫ್ ಹೆಸರಲ್ಲಿ ಕಬಳಿಸುವ ಕಾರ್ಯ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.
10-12 ನೇ ಶತಮಾನದ ಮಠಮಾನ್ಯದ ಆಸ್ತಿಯನ್ನೂ ವಕ್ಫ್ ಪಹಣಿಯಲ್ಲಿ ಸೇರಿಸಿದ್ದಾರೆ. ಈ ನಿಟ್ಟಿನಲ್ಲಿ ಮೂರು ತಂಡದಲ್ಲಿ ಬಿಜೆಪಿ ವಕ್ಫ್ ವಿರುದ್ಧ ಅಭಿಯಾನ ಆರಂಭ ಮಾಡಿದ್ದೇವೆ ಎಂದು ಹೇಳಿದರು.
ಪ್ರತಿಭಟನೆಯ ಬಳಿಕ, ಕಾಂಗ್ರೆಸ್ ಪ್ರಾಯೋಜಿತ ವಕ್ಫ್ ಮಂಡಳಿಯಿಂದ ಭೂಮಿಗಾಗಿ ನೊಟೀಸ್ ಸ್ವೀಕರಿಸಿದವರಿಂದ ಮತ್ತು ಭೂಮಿ ಕಳೆದುಕೊಂಡವರಿಂದ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಸಿ.ಟಿ.ರವಿ, ಬಿ.ಸಿ. ಪಾಟೀಲ್, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ಸಂಸದ ಎಸ್. ಮುನಿಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.