ಬೆಂಗಳೂರು, ಡಿ.04(DaijiworldNews/AA): ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾದ ಐವಿ ದ್ರಾವಣ ಪೂರೈಕೆ ಮಾಡಿರುವ ಕಂಪನಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಐವಿ ದ್ರಾವಣದ 22 ಬ್ಯಾಚ್ಗಳು ಸ್ಟಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂಬ ವರದಿ ಹಿನ್ನೆಲೆ ಕಂಪನಿಯ ವಿರುದ್ಧ ಕೇಸ್ ದಾಖಲಿಸಿ ಎಂದು ಸೂಚನೆ ನೀಡಿದರು.
ಈ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು, ರಾಜ್ಯದ ಡ್ರಗ್ ಕಂಟ್ರೋಲ್ ನೀಡಿದ 22 ಬ್ಯಾಚ್ ಗಳ ಎನ್ಎಸ್ಕ್ಯೂ ವರದಿಯಲ್ಲಿ 13 ಬ್ಯಾಚ್ಗಳ ವರದಿ ಪ್ರಶ್ನಿಸಿ ಕಂಪನಿಯವರು ಸೆಂಟ್ರಲ್ ಡ್ರಗ್ ಲ್ಯಾಬರೋಟಿರಿ ಮೆಟ್ಟಿಲೇರಿದ್ದಾರೆ. ಅದರಲ್ಲಿ 4 ಬ್ಯಾಚ್ಗಳು ಗುಣಮಟ್ಟ ಹೊಂದಿವೆ ಎಂದು ಸೆಂಟ್ರಲ್ ಡ್ರಗ್ ಲ್ಯಾಬ್ ವರದಿ ನೀಡಿದೆ. ಅಲ್ಲದೇ 13 ಬ್ಯಾಚ್ ಗಳ ಬಗ್ಗೆ ಸೆಂಟ್ರಲ್ ಡ್ರಗ್ ಲ್ಯಾಬ್ ನಿಂದ ವರದಿ ಬರಬೇಕಿದೆ ಎಂದು ತಿಳಿಸಿದರು. ಉಳಿದ 9 ಬ್ಯಾಚ್ ಗಳ ವಿಚಾರವಾಗಿ ಕಂಪನಿಯವರನ್ನ ಪ್ರಾಸಿಕ್ಯೂಷನ್ಗೆ ಒಳಪಡಿಸಬಹುದಲ್ಲ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.