ಬೆಂಗಳೂರು, ಡಿ.04(DaijiworldNews/AA): ಮುಡಾ ಕೇಸ್ನಲ್ಲಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಸರ್ಕಾರ ಮತ್ತು ಸಚಿವರು ಆಲಿಬಾಬಾ ೪೦ ಕಳ್ಳರಿ ರೀತಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಇಂದು ಮುಡಾ ಅಕ್ರಮದ ಬಗ್ಗೆ ಇಡಿ ಲೋಕಾಯುಕ್ತಗೆ ಪತ್ರ ಬರೆದಿರೋ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಪತ್ರಕ್ಕೂ ಕೇಂದ್ರ ಸರ್ಕಾರಕ್ಕೂ ಏನ್ ಸಂಬಂಧ? ಮುಡಾ ಹಗರಣದ ಬಗ್ಗೆ ಹೈಕೋರ್ಟ್ನಲ್ಲಿ ತನಿಖೆಗೆ ಆದೇಶ ಆಗಿದೆ. ಅದರ ಮೇಲೆ ತನಿಖೆ ನಡೆಯಿತ್ತಿದೆ. ಇಡಿಯವರಿಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿಲ್ಲ. ಮುಡಾ ಕೇಸ್ನಲ್ಲಿ ರಾಜ್ಯಪಾಲರಿಗೆ ದೂರು ನೀಡಿರೋರೆ ಇಡಿಗೂ ದೂರು ಕೊಟ್ಟಿದ್ದಾರೆ. ಮುಡಾದಲ್ಲಿ ಹಣಕಾಸು ವ್ಯವಹಾರ ನಡೆದಿರೋ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ. ಅದರ ಮೇಲೆ ಇಡಿ ತನಿಖೆ ನಡೆಸಿದೆ, ಮಾಹಿತಿ ಕೊಟ್ಟಿದೆ ಎಂದಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಸರ್ಕಾರದ ಅಧೀನದಲ್ಲಿ ಬರೋರು. ಇವತ್ತು ಎಷ್ಟು ಜನ ಮಂತ್ರಿಗಳು ಸಮಜಾಯಿಷಿ ಕೊಡ್ತಿದ್ದಾರೆ. ಇಡಿಯನ್ನ ಕೃಷ್ಣಭೈರೇಗೌಡರು ಸೀಳು ನಾಯಿ ಅಂದಿದ್ದಾರೆ. ಅವರಿಗೆ ಹ್ಯಾಟ್ಸ್ ಆಫ್ ಮಾಡೋಣ. ಇಡಿ ಸೀಳು ನಾಯಿ ಆದರೆ ನಿಮ್ಮ ಎಸ್ಐಟಿ ಏನು? ಎಸ್ಐಟಿ ಅವರು ಏನು ಮಾಡಿದ್ರು. ನಿಮ್ಮ ಸರ್ಕಾರದಲ್ಲಿ ಎಷ್ಟು ಎಸ್ಐಟಿ ಮಾಡಿದ್ದೀರಾ? 17-18 ಎಸ್ಐಟಿ ಮಾಡಿದ್ದೀರಾ. ಸಹೋದರ ರೇವಣ್ಣನ ಕೇಸ್ ನಲ್ಲಿ ಯಾವ ರೀತಿ ನಡೆದುಕೊಂಡ್ರಿ. ಮಾಜಿ ಪ್ರಧಾನಿಗಳ ಮನೆಗೆ ಪೊಲೀಸರನ್ನ ನುಗ್ಗಿಸಿ ರೇವಣ್ಣನನ್ನ ಬಂಧನ ಮಾಡಿಸಿದ್ರಿ. ನಿಮಗೆ ಯಾವ ನೈತಿಕತೆ ಇದೆ? ರೇವಣ್ಣ ನಿಮಗೆ ಏನ್ ಮಾಡಿದ್ದ? 5 ವರ್ಷ ಕೇಸನ್ನ ಯಾರಿಂದಲೋ ದೂರು ಪಡೆದು ಏನೇನು ನಡೆಸಿದ್ದೀರಾ ನೀವು, ಎಲ್ಲವೂ ಗೊತ್ತಿದೆ ಎಂದು ಕಿಡಿಕಾರಿದರು.