ಕಲಬುರ್ಗಿ, ಡಿ.05(DaijiworldNews/AK): ವಕ್ಫ್ ಕಾರಣಕ್ಕೆ ರೈತರಿಗೆ, ಮಠಮಾನ್ಯಗಳಿಗೆ ಅನ್ಯಾಯ ಆಗಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಜಂಟಿ ಸಂಸದೀಯ ಸಮಿತಿ ರಚಿಸಿದ್ದಾರೆ. ಆ ಸಮಿತಿಯು ದೇಶಾದ್ಯಂತ ಪ್ರವಾಸ ಮಾಡಿದೆ. ವಕ್ಫ್ ಕಾಯಿದೆ ತಿದ್ದುಪಡಿಗೆ ಪ್ರಧಾನಿಯವರು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಕಲಬುರ್ಗಿಯಲ್ಲಿ ಇಂದು ವಕ್ಫ್ ಸಂಬಂಧಿತ ಹೋರಾಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಿಲ್ಲಾ ಪ್ರವಾಸ ಮಾಡಿ ಜಿಲ್ಲಾಧಿಕಾರಿಗಳನ್ನು ಕಟ್ಟಿಹಾಕಿ ಸಿಎಂ ಆದೇಶವನ್ನು ತಿಳಿಸಿ, ವಕ್ಫ್ ಮೂಲಕ ಜಮೀನು ಕಿತ್ತುಕೊಳ್ಳಲು ಸೂಚಿಸಿದ್ದಾರೆ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯನವರು ಒಂದು ಕೋಮು, ಒಂದು ಧರ್ಮಕ್ಕೆ ಮುಖ್ಯಮಂತ್ರಿ ಆಗಿದ್ದಾರಾ ಅಥವಾ ನಾಡಿನ ಆರೂವರೆ ಕೋಟಿ ಜನರಿಗೆ ಸಿಎಂ ಆಗಿದ್ದಾರಾ ಎಂಬ ಅನುಮಾನ ಬರುವಂತಾಗಿದೆ ಎಂದು ತಿಳಿಸಿದರು.
ಯಾಕೆ ಪುಣ್ಯಾತ್ಮ ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಅಷ್ಟೊಂದು ದ್ವೇಷ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಯಾಕೆ ಹಿಂದೂಗಳ ಬಗ್ಗೆ ಅವರಿಗೆ ಅಷ್ಟೊಂದು ಆಕ್ರೋಶ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮಾಜಿ ಸಚಿವರಾದ ಬಿ.ಶ್ರೀರಾಮುಲು, ರೇಣುಕಾಚಾರ್ಯ, ಬೈರತಿ ಬಸವರಾಜ್, ಮುರುಗೇಶ್ ನಿರಾಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನ ಪರಿಷತ್ ಉಪ ನಾಯಕ ಸುನೀಲ್ ವಲ್ಯಾಪುರೆ, ಶಾಸಕರಾದ ಬಸವರಾಜ ಮತ್ತಿಮೊಡ, ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಶಶೀಲ್ ನಮೋಶಿ, ಬಿ.ಜಿ.ಪಾಟೀಲ, ಪ್ರಮುಖರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ್ ಪಾಟೀಲ ತೇಲ್ಕೂರ, ಸುಭಾಷ್ ಪಾಟೀಲ ಗುತ್ತೇದಾರ, ಅಮರನಾಥ ಪಾಟೀಲ, ಬಾಬುರಾವ್ ಚೌಹಾಣ್, ಶರಣು ತಳ್ಳಿಕೇರಿ, ಸಿದ್ದು ಪಾಟೀಲ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಗ್ರಾಮೀಣ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಿ, ರೈತ ಮೋರ್ಚಾದ ಮುಖಂಡ ರುದ್ರೇಶ್ ಮತ್ತಿತರ ಪ್ರಮುಖರು ಇದ್ದರು.