ಬೆಂಗಳೂರು, ಡಿ.05(DaijiworldNews/AA): ದರ್ಶನ್ ಮಧ್ಯಂತರ ಜಾಮೀನು ಅರ್ಜಿಯನ್ನು ರದ್ದು ಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಶೀಘ್ರವೇ ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರ ಬಂದು ಇದೀಗ ಆಸ್ಪತ್ರೆಯಲ್ಲಿ ಇದ್ದಾರೆ. ಅವರಿಗೆ ಅಲ್ಲಿ ಫಿಸಿಯೋ ಥೆರೆಪಿ ಮಾಡಿಸಲಾಗುತ್ತಿದ್ದು ಶೀಘ್ರವೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಮಧ್ಯಂತರ ಜಾಮೀನು ರದ್ದು ಕೋರಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದೆ.
ದರ್ಶನ್ ಅವರು ಬೆನ್ನು ನೋವಿನ ಕಾರಣಕ್ಕಾಗಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಅವರಿಗೆ ಜಾಮೀನು ನೀಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಕೋರ್ಟ್ ನಲ್ಲಿ ವಾದ-ವಿವಾದ ನಡೆಯುತ್ತಿದೆ. ಈ ಮಧ್ಯೆ ಅವರ ಮಧ್ಯಂತರ ಜಾಮೀನು ರದ್ದತಿ ಕೋರಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಡಿ. 6 ಅಥವಾ ಡಿ. 9 ರಂದು ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ.