ನವದೆಹಲಿ,ಡಿ.05 (DaijiworldNews/TA):ರಸ್ತೆ ಅಪಘಾತಗಳಲ್ಲಿನ ಸಾವುಗಳನ್ನು ಕಡಿಮೆ ಮಾಡಲು ಸರ್ಕಾರದ ನಿರಂತರ ಪ್ರಯತ್ನಗಳ ಹೊರತಾಗಿಯೂ, ಜನರಿಗೆ ಕಾನೂನಿನ ಬಗ್ಗೆ ಗೌರವ ಅಥವಾ ಭಯವಿಲ್ಲದ ಕಾರಣ ಸಾವುನೋವುಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.

ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಿಕ್ರಿಯಿಸಿದ ಗಡ್ಕರಿ, ತಾವೂ ರಸ್ತೆ ಅಪಘಾತವನ್ನು ಅನುಭವಿಸಿದವ ಎಂದು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
ಅಪಘಾತ ತಡೆಗೆ ಕಠಿಣ ಪ್ರಯತ್ನದ ಹೊರತಾಗಿಯೂ ರಸ್ತೆ ಅಪಘಾತದಲ್ಲಿ ಈ ವರ್ಷ 1.68 ಲಕ್ಷ ಸಾವುಗಳು ಸಂಭವಿಸಿವೆ. ರಸ್ತೆಗಳ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದ ಕಾರಣ ಈ ಸಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿವೆ. ಸಾರ್ವಜನಿಕ ಪ್ರತಿನಿಧಿಗಳು, ಮಾಧ್ಯಮಗಳು ಅಥವಾ ಸಮಾಜದ ಸಹಕಾರ ದೊರೆಯದೆ ಇದರ ನಿಯಂತ್ರಣ ಸಾಧ್ಯವಿಲ್ಲ. ನಾವೂ ದಂಡವನ್ನು ಹೆಚ್ಚಿಸಿದ್ದೇವೆ, ಆದರೆ ಜನರು ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುವುದಾಗಿ ಅವರು ಆತಂಕ ಹೊರ ಹಾಕಿದ್ದಾರೆ.
ಜನರಿಗೆ ಕಾನೂನಿನ ಬಗ್ಗೆ ಗೌರವವ ಹಾಗೂ ಭಯವಿಲ್ಲದಿರುವುದು ನಮ್ಮ ಸಮಾಜದ ದೊಡ್ಡ ಸಮಸ್ಯೆ . ರೆಡ್ ಸಿಗ್ನಲ್ ನಲ್ಲಿ ನಿಲ್ಲುವುದಿಲ್ಲ. ಅಲ್ಲದೇ ನ್ಮಮ ಜನ ಹೆಲ್ಮೆಟ್ ಹಾಕುವುದಿಲ್ಲ. ಹೆಲ್ಮೆಟ್ ಹಾಕದ ಕಾರಣಕ್ಕೆ 30,000 ಜನ ಸಾಯುತ್ತಾರೆ ಎಂದು ಹೇಳಿದ್ದಾರೆ.