ಬೆಂಗಳೂರು,ಡಿ.06 (DaijiworldNews/AK): ಬಳ್ಳಾರಿ ಹಾಗೂ ರಾಜ್ಯದ ವಿವಿಧ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಮತ್ತು ಶಿಶುವಿನ ಮರಣ ಸಂಬಂಧ ರಾಜ್ಯ ಬಿಜೆಪಿ ನಿಯೋಗವು ಇಂದು ಲೋಕಾಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕು.ಮಂಜುಳಾ, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ವೈದ್ಯಕೀಯ ಪ್ರಕೋಷ್ಟದ ರಾಜ್ಯ ಸಂಚಾಲಕ ಡಾ.ನಾರಾಯಣ್, ಸಹ ಸಂಚಾಲಕ ಡಾ.ಎಂ.ಎಸ್.ಸದಾನಂದ, ರಾಜ್ಯ ಸಮಿತಿ ಸದಸ್ಯರಾದ ಡಾ. ಲಕ್ಷ್ಮಣ್, ಡಾ. ಸಾಯಿ ಆದರ್ಶ್ ಅವರ ನಿಯೋಗವು ಈ ಮನವಿ ಸಲ್ಲಿಸಿದೆ. ಬಾಣಂತಿಯರ ಸಾವು, ಶಿಶುಗಳ ದುರ್ಮರಣದ ಕುರಿತು ಗಮನ ಸೆಳೆಯಿತಲ್ಲದೆ ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸಿತು.
ಈ ದುರ್ಘಟನೆ ಸಂಬಂಧ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ಕೊಡಬೇಕೆಂದು ನಿಯೋಗವು ಮನವಿಯಲ್ಲಿ ಕೋರಿದೆ. ಸಾವಿನ ಹಿಂದಿರುವ ಕಾರಣ, ಕಳಪೆ ಔಷಧಿ ಖರೀದಿಯ ಹಿಂದಿರುವವರು ಮತ್ತು ವಿಷಯವನ್ನು ಹತ್ತಿಕ್ಕಲು ಮುಂದಾದವರ ವಿಷಯ ಹೊರಬರುವ ದೃಷ್ಟಿಯಿಂದ ನ್ಯಾಯಾಂಗ ತನಿಖೆ ಮಾಡಿಸುವಂತೆ ಮನವಿ ತಿಳಿಸಿದೆ.
ಆಸ್ಪತ್ರೆಯ ಆಡಳಿತವರ್ಗ, ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಇದರ ಹಿಂದಿದ್ದು, ಘಟನೆಗೆ ಕಾರಣರಾದವರು ಕಾನೂನಿನಡಿ ಶಿಕ್ಷೆ ಎದುರಿಸುವಂತಾಗಬೇಕು; ಆರೋಗ್ಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯವನ್ನು ಸಹಿಸಲಾಗದು ಎಂದು ತಿಳಿಸಲಾಗಿದೆ.
ಸಂತ್ರಸ್ತ ಕುಟುಂಬಗಳಿಗೆ ಸಮರ್ಪಕ ಪರಿಹಾರ ಕೊಡಬೇಕು. ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯ ಆಡಳಿತಾತ್ಮಕ ಸುಧಾರಣೆ ತಂದು ಭ್ರಷ್ಟಾಚಾರ ಮತ್ತು ಕಳಪೆ ಗುಣಮಟ್ಟದ ಔಷಧಿ ಮತ್ತು ಇತರ ಸಲಕರಣೆಗಳ ಸರಬರಾಜಾಗದಂತೆ ನೋಡಿಕೊಳ್ಳಬೇಕು ಎಂದು ನಿಯೋಗ ತನ್ನ ಮನವಿಯಲ್ಲಿ ತಿಳಿಸಿತು.
ದುರ್ಘಟನೆಯ ಹೊಣೆ ಹೊತ್ತು ದಿನೇಶ್ ಗುಂಡೂರಾವ್ ಅವರು ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.