ದೆಹಲಿ, ಡಿ.07(DaijiworldNews/AA): ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ತನ್ನ ಕೇಂದ್ರವನ್ನು ಮುಂಜಾನೆ ಸುಟ್ಟು ಹಾಕಲಾಗಿದೆ ಎಂದು ಇಸ್ಕಾನ್ನ ಕೊಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ ಅವರು ಇಂದು ಆರೋಪ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಇಸ್ಕಾನ್ನ ಕೊಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ ಅವರು, ಇಸ್ಕಾನ್ ಸಂಸ್ಥೆಯ ನಮ್ಹಟ್ಟಾ ಕೇಂದ್ರವನ್ನು ಬಾಂಗ್ಲಾದೇಶದಲ್ಲಿ ಸುಟ್ಟುಹಾಕಲಾಗಿದೆ. ಇಂದು ಮುಂಜಾನೆ 2-3 ಗಂಟೆಯ ನಡುವೆ ದುಷ್ಕರ್ಮಿಗಳು ತುರಗ್ ಪೊಲೀಸ್ ವ್ಯಾಪ್ತಿಯ ಧೌರ್ ಗ್ರಾಮದಲ್ಲಿರುವ ಹರೇ ಕೃಷ್ಣ ನಾಮಹಟ್ಟಾ ಸಂಘದ ವ್ಯಾಪ್ತಿಯಲ್ಲಿರುವ ರಾಧಾ ಕೃಷ್ಣ ದೇವಸ್ಥಾನ ಮತ್ತು ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ. ಈ ದೇವಸ್ಥಾನಗಳು ಢಾಕಾದಲ್ಲಿವೆ ಎಂದು ಆರೋಪಿಸಿದ್ದಾರೆ.
ದೇವಸ್ಥಾನದ ಹಿಂಭಾಗದಲ್ಲಿರುವ ತಾಮ್ರದ ಮೇಲ್ಛಾವಣಿಯನ್ನು ಎತ್ತಿ ಪೆಟ್ರೋಲ್ ಅಥವಾ ಆಕ್ಟೇನ್ ಬಳಸಿ ಬೆಂಕಿಯನ್ನು ಹಚ್ಚಲಾಯಿತು. ಹಿಂದೂ ಸಮುದಾಯದ ಸದಸ್ಯರ ಮೇಲೆ ದಾಳಿಗಳು ಎಡೆಬಿಡದೆ ನಡೆಯುತ್ತಿವೆ, ಇಸ್ಕಾನ್ ಬಾಂಗ್ಲಾದೇಶದ ಸರ್ಕಾರದ ಗಮನಕ್ಕೆ ಈ ಮಾಹಿತಿಯನ್ನು ನೀಡಿದ್ದರೂ ಅವರ ಕುಂದುಕೊರತೆಗಳನ್ನು ಶಮನಗೊಳಿಸಲು ಮತ್ತು ಅವರ ಕಾಳಜಿಯನ್ನು ಪರಿಹರಿಸಲು ಪೊಲೀಸರು ಮತ್ತು ಆಡಳಿತವು ಆದ್ಯತೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶವು ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ವಿಶೇಷವಾಗಿ ಹಿಂದೂಗಳ ಮೇಲೆ ದಾಳಿ ನಡೆಸುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ಬಾಂಗ್ಲಾದೇಶದ ವಿವಿಧೆಡೆ ಇಸ್ಕಾನ್ ಆಸ್ತಿಗಳ ಮೇಲೆ ದಾಳಿ ನಡೆದಿದೆ.