ಕೋಲಾರ, ಡಿ.08(DaijiworldNews/AA): ಸಿದ್ದರಾಮಯ್ಯ ರಾಜಕೀಯ ಬಿಡುವ ಮಾತೇ ಇಲ್ಲ. ರಾಜಕೀಯ ಕೊನೆಯಗುತ್ತಿದೆ ಎಂದರೆ ವಯಸ್ಸಾಗುತ್ತಿದೆ ಎಂದು ಅರ್ಥ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇಷ್ಟು ವರ್ಷ ರಾಜಕಾರಣ ಮಾಡಿದ್ದಾರೆ. ಇನ್ನೂ ಎಷ್ಟು ವರ್ಷ ಮಾಡಲು ಸಾಧ್ಯ ಎಂಬ ದಾಟಿಯಲ್ಲಿ ಹೇಳಿದ್ದಾರೆ ಅಷ್ಟೇ. ಸಿದ್ದರಾಮಯ್ಯ ಗಟ್ಟಿಯಾಗಿರುವವರೆಗೂ ಅವರು ಈ ರಾಜ್ಯಕ್ಕೆ ಬೇಕು, ಅವರ ಸೇವೆ ಬೇಕು. ಸಿದ್ದರಾಮಯ್ಯನವರ ಜೀವನಪರ್ಯಂತ ನಿವೃತ್ತಿ ಮಾತಿಲ್ಲ. ರಾಜಕೀಯವಾಗಿ ಇದ್ದೇ ಇರುತ್ತಾರೆ ಎಂದು ಸ್ಪಷ್ಟ ಪಡಿಸಿದರು.
ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರವಾಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಈ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ. ಹೈಕಮಾಂಡ್ ಮಾತಿಗೆ ಬದ್ಧರಾಗಿರುತ್ತೇವೆ. ಸದ್ಯಕ್ಕೆ ಸಿದ್ದರಾಮಯ್ಯನವರ ಕುರ್ಚಿ ಖಾಲಿ ಇಲ್ಲ. ಕುರ್ಚಿ ಬಿಡಿ ಎಂದು ಯಾರೂ ಹೇಳುತ್ತಿಲ್ಲ. ಆದರೆ ವಿರೋಧ ಪಕ್ಷದವರ ಬೊಬ್ಬೆ ಬಿಟ್ಟರೆ, ನಮ್ಮ ಪಕ್ಷದಲ್ಲಿ ಯಾರೂ ಸಹ ಬಿಡಿ ಎಂದು ಹೇಳುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸ್ಥಾನ 138 ಆಗಿದೆ. ಬಲ ಜಾಸ್ತಿ ಆಗಿದೆ. ಅಧಿಕಾರ ಪ್ರಸ್ತಾಪ ಪಬ್ಲಿಕ್ನಲ್ಲಿ ಆಗಿಲ್ಲ, ನಮ್ಮಲ್ಲೂ ಸಹ ಆಗಿಲ್ಲ. ಸಿಎಂ, ಡಿಸಿಎಂ, ಇಬ್ಬರ ನಡುವೆ ಒಪ್ಪಂದಕ್ಕೆ ಬಂದಿರಬಹುದು. ಆದರೆ ಇದರ ಬಗ್ಗೆ ಎಲ್ಲೂ ಪ್ರಸ್ತಾಪ ಇಲ್ಲ. ಅವರ ಮನಸ್ಸಿಗೆ ತಕ್ಕಂತೆ ಕೆಲವರು ಮಾತನಾಡಿರಬಹುದು. ಬಹಿರಂಗವಾಗಿ, ಶಾಸಕಾಂಗ ಸಭೆಯಲ್ಲಿ ಇಬ್ಬರು ನಾಯಕರು ಒಪ್ಪಂದ ಆಗಿದೆ ಎಂದು ಎಲ್ಲೂ ಹೇಳಿಲ್ಲ ಎಂದರು.