ಹುಬ್ಬಳ್ಳಿ, ಡಿ.08(DaijiworldNews/AA): ವಿಜ್ಞಾನ, ತಂತ್ರಜ್ಞಾನ ಮುಂದುವರೆದ ಇಂತಹ ಕಾಲದಲ್ಲೂ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸುತ್ತಿರುವುದು ತಲೆತಗ್ಗಿಸಬೇಕಾದ ಸಂಗತಿ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅತ್ಯಂತ ಬೇಜವಾಬ್ದಾರಿತನದಿಂದ ವರ್ತಿಸಿದ ಪ್ರವೃತ್ತಿ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಪಾದಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸೂಚಿಸಿದ ಮೂರು ದಿನವಾದರೂ ಯಾವ ಸಚಿವರು ಸ್ಥಳಕ್ಕೆ ಹೋಗಿಲ್ಲ. ಸ್ಥಳೀಯವಾಗಿ ಔಷಧಗಳು ಲಭ್ಯ ಇಲ್ಲ, ಯಾವ ಕಂಪನಿ ಕೊಟ್ಟರೂ ತೆಗೆದುಕೊಳ್ಳುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ದಿವಾಳಿ ಆಗಿದೆ ಎಂದು ಆಕ್ರೋಶ ಹೊರಹಾಕಿದರು.
ಆರೋಗ್ಯ ಸಚಿವರು, ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಏನೇನೋ ಉತ್ತರ ಕೊಡುತ್ತಾರೆ. ಸ್ಥಳಕ್ಕೆ ಅವರು ತಕ್ಷಣ ಹೋಗಬೇಕಿತ್ತು. ಆದರೆ ವಿರೋಧ ಪಕ್ಷದ ನಾಯಕರು ಹೋದ ನಂತರ ಅವರು ಹೋಗುತ್ತಾರೆ. ಇದು ಜನರ ಮೇಲೆ ತೋರಿಸುವ ಜವಾಬ್ದಾರಿ ಎಂದು ಕಿಡಿ ಕಾರಿದರು.
ಮುಂದುವರೆದು ನಬಾರ್ಡ್ ನಿಂದ ಕೋ ಆಪರೇಟಿವ್ ವಲಯಕ್ಕೆ ನೀಡುವ ಸಾಲದಲ್ಲಿ ಕೊರತೆ ಆಗಿಲ್ಲ. ಯಡಿಯೂರಪ್ಪ ಸರ್ಕಾರ ಜಿರೋ ಪರ್ಸೆಂಟ್ ಬಡ್ಡಿಗೆ ಸಾಲ ನೀಡುವ ನಿರ್ಧಾರ ಕೈಗೊಂಡಿದ್ದು ಸಿದ್ದರಾಮಯ್ಯ ತೆಗೆದುಕೊಂಡ ನಿರ್ಧಾರವಲ್ಲ. ಮುಡಾ, ಅಬಕಾರಿ, ವಾಲ್ಮೀಕಿ ಹಗರಣದಲ್ಲಿ ಸಿಕ್ಕಿಕೊಂಡಿದ್ದಾರೆ. ಇದು ಚರ್ಚೆ ಆಗಬಾರದು ಎಂಬ ಉದ್ದೇಶದಿಂದ ಬೇರೆಡೆಗೆ ಗಮನ ಸೆಳೆಯುತ್ತಿದ್ದಾರೆ ಎಂದು ಟೀಕಿಸಿದರು.