ಬೆಳಗಾವಿ, ಡಿ.08(DaijiworldNews/AA): ಬೆಳಗಾವಿಯಲ್ಲಿನ ಬಾಣಂತಿಯರು, ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತನಿಖೆಗೆ ಆದೇಶಿಸಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ ಬಾಣಂತಿಯರು, ಗರ್ಭಿಣಿಯರು, ಮಕ್ಕಳ ಸಾವು ಯಾವ ಕಾರಣಕ್ಕೆ ಆಗಿದೆ ಎಂದು ನೋಡುತ್ತಿದ್ದೇವೆ. ಬಳ್ಳಾರಿಯಲ್ಲಿ ನಡೆದ ಘಟನೆಯ ಸಮಗ್ರ ವರದಿಯನ್ನು ಕೇಳಿದ್ದೇವೆ. ಐವಿ ಫ್ಲೂಯಿಡ್ನಿಂದ ಆಗಿರಬಹುದು ಎಂದು ಕಂಪನಿ ಬಗ್ಗೆ ಕೂಡ ವಿಚಾರಣೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಪೌಷ್ಠಿಕಾಂಶದ ಕೊರತೆಯಿಂದ ಮಕ್ಕಳ ಸಾವಾಗಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪೌಷ್ಠಿಕಾಂಶದ ವಿಚಾರವಾಗಿ ನಮ್ಮ ಇಲಾಖೆ ಆರೋಗ್ಯ ಇಲಾಖೆ ಜಂಟಿಯಾಗಿ ಪ್ರೋಟಿನ್ ಸಂಬಂಧ ಮೂರು ತಿಂಗಳ ಗರ್ಭಿಣಿ ಇದ್ದಾಗಿನಿಂದ ನೋಡುತ್ತಿದ್ದೇವೆ. ಬರೀ ಪೌಷ್ಠಿಕಾಂಶದಿಂದ ಸಾವಾಗಿದೆ ಎಂದು ಹೇಳಲು ಆಗಲ್ಲ. ಬೇರೆ ಕಾರಣ ಇರಬಹುದು. ಒಂದು ವಾರದ ಗಡುವು ಕೊಟ್ಟು ತನಿಖೆ ನಡೆಸಿ ವರದಿ ಕೊಡುವಂತೆ ಹೇಳುತ್ತೇವೆ. ಬೆಳಗಾವಿಯಲ್ಲಿ ಸಾವಿನ ಕುರಿತು ಕೂಡ ವರದಿ ಕೊಡುವಂತೆ ಕೇಳುತ್ತೇನೆ ಎಂದು ತಿಳಿಸಿದರು.
ಪೌಷ್ಠಿಕ ಆಹಾರ ನೀಡುವಲ್ಲಿ ಯತ್ನಾಳ್ ಭ್ರಷ್ಟಾಚಾರ ಆರೋಪ ಹೊರಿಸಿದ ವಿಚಾರವಾಗಿ ಮಾತನಾಡಿ, ಸದನದಲ್ಲಿ ಹತ್ತು ಸಾರಿ ಚರ್ಚೆ ಆಗಿದೆ. ನಾವೇನು ಹೊಸದು ಮಾಡಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಮಾಡುತ್ತಿದ್ದೇವೆ. ಬಿಜೆಪಿ ಅವಧಿಯಲ್ಲಿ ಈ ರೀತಿ ಆಗಿದೆ. 70,000 ಅಂಗನವಾಡಿಯಲ್ಲಿ ಏನೂ ದುರ್ಘಟನೆ ಆಗಿಲ್ಲ. ದೇವರ ಆಶೀರ್ವಾದದಿಂದ ಯಾವ ಮಕ್ಕಳ ಆರೋಗ್ಯ ಸಮಸ್ಯೆ ಆಗಿಲ್ಲ. ಎಲ್ಲಿಯಾದರೂ ಘಟನೆ ಆದರೆ, ಕಳಪೆ ಆಹಾರ ಏನಾದರೂ ಬಂದರೆ ನಮ್ಮ ಗಮನಕ್ಕೆ ತನ್ನಿ, ಸರಿಪಡಿಸುತ್ತೇನೆ ಎಂದು ಹೇಳಿದರು.