ಬೆಂಗಳೂರು, ಡಿ.10(DaijiworldNews/AA): ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ನಿಧನಕ್ಕೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್, ಮಾಜಿ ಸಂಸದ ಪ್ರತಾಪ್ ಸಿಂಹ, ಅಶ್ವಿನಿ ಪುನೀತ್ ರಾಜ್ ಕುಮಾರ್, ನಟಿ ರಮ್ಯಾ, ಸಾರಾ ಗೋವಿಂದು, ನಟ ಶಿವರಾಜ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

ಎಸ್.ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅವರು, ಎಸ್.ಎಂ ಕೃಷ್ಣರವರು ಡಿಗ್ನಿಫೈಡ್ ರಾಜಕಾರಣಿ. ನಮ್ಮ ಕರ್ನಾಟಕ ಕಂಡಂತಹ ಅತ್ಯಂತ ಶ್ರೇಷ್ಠ ರಾಜಕಾರಣಿ ಆಗಿದ್ದರು. ರಾಜ್ಯದ ರಾಜಕಾರಣದಲ್ಲಿ ಸಭ್ಯತೆ, ಸಂಸ್ಕಾರ ಕಲಿಸಿದವರು. ಮಂಡ್ಯದ ಹೆಮ್ಮೆಯ ಸುಪುತ್ರ ಆಗಿದ್ದರು. ಎಸ್.ಎಂ ಕೃಷ್ಣರವರು ಡಿಗ್ನಿಫೈಡ್ ರಾಜಕಾರಣಿ ಆಗಿದ್ದರು. ಇನ್ನೂ ಎಂದೂ ಇಂತಹ ರಾಜಕೀಯ ವ್ಯಕ್ತಿಯನ್ನು ನೋಡಲು ಆಗೋದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿರುವ ಆರಗ ಜ್ಞಾನೇಂದ್ರ ಅವರು, ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸು ಕಂಡಿದ್ದರು. ಎಸ್.ಎಂ ಕೃಷ್ಣ ಅವರ ಅಗಲಿಕೆಯಿಂದ ನೋವಾಗಿದೆ. ಅವರು ಒಬ್ಬ ಸಜ್ಜನ ರಾಜಕಾರಣಿ ಆಗಿದ್ದರು. ಅವರ ಪತ್ನಿ ಪ್ರೇಮಾ ತೀರ್ಥಹಳ್ಳಿಯವರು, ಅವರು ಇಲ್ಲಿನ ಅಳಿಯ. ಈ ಹಿನ್ನಲೆಯಲ್ಲಿ ನನ್ನ ಮೇಲೆ ವಿಶೇಷ ಪ್ರೀತಿ ಅವರಿಗೆ ಇತ್ತು ಎಂದಿದ್ದಾರೆ.
ಎಸ್ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಶಿವಣ್ಣ, ಎಸ್.ಎಂ ಕೃಷ್ಣ ಅವರ ಮೇಲೆ ತುಂಬಾ ಗೌರವಿದೆ. ಸಿಎಂ ಅಂದರೆ ಹೇಗಿರಬೇಕು ಅನ್ನೋದಾದ್ರೆ ಕೃಷ್ಣ ಅವರಂತಿರಬೇಕು. ಶಿಸ್ತು ಅವರು ಮಾಡುವ ಕೆಲಸದಲ್ಲಿ ಇರುತ್ತಿತ್ತು. ವೈಯಕ್ತಿಕವಾಗಿ ನಮಗೂ ಅವರೊಂದಿಗೆ ಒಡನಾಟವಿದೆ. ಅವರ ಇಡೀ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯವಿದೆ. ಖಂಡಿತ ಅವರಿಲ್ಲ ಅನ್ನೋದು ದುಃಖ ಆಗುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾತನಾಡಿದ್ದಾರೆ.
ಶಿವಣ್ಣ ಬಳಿಕ ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಯುವರಾಜ್ ಕುಮಾರ್ ಅವರು ಎಸ್ಎಂ ಕೃಷ್ಣ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಎಸ್ಎಂ ಕೃಷ್ಣ ಅವರು ಕರ್ನಾಟಕಕ್ಕೆ ಐಟಿ-ಬಿಟಿ ದೃಷ್ಟಿಯಲ್ಲಿ ಒಂದು ದಿಕ್ಕು ದೆಸೆಯನ್ನು ತೋರಿದವರು, ಹೀಗಾಗಿ ನಮ್ಮ ರಾಜ್ಯ ಯಾವತ್ತಿಗೂ ಕೂಡ ಅವರಿಗೆ ಚಿರಋಣಿಯಾಗಿರಬೇಕು. ಕರ್ನಾಟಕದ ಮಾಜಿ ಸಿಎಂ, ಕೇಂದ್ರದಲ್ಲಿ ವಿದೇಶಾಂಗ ಸಚಿವರು, ಮಹಾರಾಷ್ಟ್ರ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಮುತ್ಸದ್ಧಿ ಎಸ್ಎಂ ಕೃಷ್ಣ ಅವರು ನಮ್ಮನ್ನಗಲಿದ್ದಾರೆ. ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ನೀಡಲಿ ಎಂದು ಪ್ರತಾಪ್ ಸಿಂಹ ಸಂತಾಪ ಸೂಚಿಸಿದ್ದಾರೆ.