ಮಂಡ್ಯ, ಡಿ.11(DaijiworldNews/AA): ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಂತ್ಯ ಸಂಸ್ಕಾರವು ಇಂದು ಸಂಜೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಹೊರವಲಯದ ಕೆಫೆ ಕಾಫಿ ಡೇ ಆವರಣದಲ್ಲಿ ಒಕ್ಕಲಿಗ ಸಂಪ್ರದಾಯಂತೆ ಹಾಗೂ ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಈ ಮೂಲಕ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.








ಇದಕ್ಕೂ ಮುನ್ನ ಪೊಲೀಸರ ತಂಡದಿಂದ ರಾಷ್ಟ್ರಗೀತೆ ನಮನ ಸಲ್ಲಿಸಲಾಯಿತು. ನಂತರ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು, ಎಸ್ಎಂಕೆ ಪತ್ನಿ ಪ್ರೇಮಾ ಕೃಷ್ಣ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಬಳಿಕ ಭಾನುಪ್ರಕಾಶ್ ಶರ್ಮಾ ಹಾಗೂ ಇತರ 15 ವೈದಿಕರ ತಂಡವು ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ, ಎಸ್.ಎಂ ಕೃಷ್ಣರ ಮೊಮ್ಮಗ ಅಮರ್ಥ್ಯ ಹೆಗ್ಡೆ ಅವರ ಚಿತೆಗೆ ಅಗ್ನಿಸ್ಪರ್ಶ ನೀಡಿದರು.
ಚಿತೆಗೆ ಅರಣ್ಯ ಇಲಾಖೆಯಿಂದ 1 ಸಾವಿರ ಕೆಜಿ ಶ್ರೀಗಂಧದ ಕಟ್ಟಿಗೆ ಪೂರೈಕೆ ಮಾಡಲಾಗಿತ್ತು. ಬಾಳೆ ಎಲೆಯಲ್ಲಿ ಪಾರ್ಥಿವ ಶರೀರ ಮುಚ್ಚಿ, 50 ಕೆಜಿ ತುಪ್ಪ ಬಳಸಿ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯ್ತು.
ಎಸ್ಎಂ ಕೃಷ್ಣರ ಅಂತ್ಯ ಸಂಸ್ಕಾರದ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಪ್ರಮುಖ ಮಠಗಳ ಪೀಠಾಧಿಪತಿಗಳು ಹಾಜರಿದ್ದರು.