ನವದೆಹಲಿ, ಡಿ.13(DaijiworldNews/AA): ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ. ದೆಹಲಿಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಅವರ ಓಲೈಸುವ ರಾಜಕೀಯ ಮಾಡುತ್ತಿದ್ದು, ರಾಜ್ಯಕ್ಕೆ ಅವರ ಕೊಡುಗೆ ಶೂನ್ಯ ಎಂದು ರಾಜ್ಯಸಭೆ ಸಂಸದ ಜಿ.ಸಿ ಚಂದ್ರಶೇಖರ್ ಕಿಡಿ ಕಾರಿದ್ದಾರೆ.

ದೆಹಲಿಯಲ್ಲಿ ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆಡಳಿತ ಪಕ್ಷಕ್ಕಿಂತ ಕಲಾಪ ವಿರೋಧ ಪಕ್ಷಕ್ಕೆ ಮುಖ್ಯ. ಜನಪರ ಧ್ವನಿ ಎತ್ತಲು ಕಲಾಪ ನಮಗೆ ವೇದಿಕೆ. ಆದರೆ, ನಮಗೆ ಇಲ್ಲಿ ಅವಕಾಶ ಸಿಗುತ್ತಿಲ್ಲ. ಧನ್ಕರ್ ಅವರ ಅವಧಿಯಲ್ಲಿ ಹೆಚ್ಚು ಕಾಲ ಕಲಾಪ ಮುಂದೂಡಿಕೆಯಾಗಿದೆ ಎಂದರು.
ವೆಂಕಯ್ಯನಾಯ್ಡು ಅವರು ಹೀಗೆ ತಾರತಮ್ಯ ಮಾಡಿರಲಿಲ್ಲ. ಅವರು ನ್ಯಾಯಾಧೀಶರ ರೀತಿ ವರ್ತಿಸಬೇಕು. ಆದರೆ, ಅವರು ಆಡಳಿತ ಪಕ್ಷಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಿಗೆ ಮೈಕ್ ಆನ್ ಮಾಡಲ್ಲ, ಕ್ಯಾಮೆರಾದಲ್ಲಿ ತೋರಿಸಲ್ಲ. ಎಲ್ಲ ಸದಸ್ಯರಿಗೂ ತಮ್ಮದೇ ಆದ ಗೌರವ ಇರುತ್ತೆ. ಎಲ್ಲರಿಗೂ ಇಲ್ಲಿ ಗೌರವ ಕೊಡಬೇಕು. ನಮ್ಮದು ಬಹುಮತ ಇಲ್ಲ ಅಂತಾ ಅವಿಶ್ವಾಸ ಮಂಡನೆ ಮಾಡಬಾರದು ಅಂತಲ್ಲ. ಜನ ವಿರೋಧಿ ನೀತಿಗಳನ್ನು ಖಂಡಿಸಲು ನಾನು ನಮ್ಮ ಜವಾಬ್ದಾರಿ ನಿಭಾಯಿಸಬೇಕು. ಸಭಾಪತಿ ಅವರಿಗೆ ಎಚ್ಚರಿಕೆ ನೀಡಲು ನಾವು ಇದನ್ನು ಮಾಡಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡರು.
ಕಲಾಪಗಳು ಮುಂದೂಡಿಕೆ ಬಗ್ಗೆ ನಮಗೂ ಬೇಸರ ಇದೆ. ಬಜೆಟ್ ತಯಾರಾಗುವ ಸಮಯ ಇದು. ಈ ಸಮಯದಲ್ಲಿ ಕರ್ನಾಟಕದ ಬಗ್ಗೆ ಗಮನ ಸೆಳೆಯಬೇಕು. ಆದರೆ, ರಾಜ್ಯದ ಕೇಂದ್ರ ಸಚಿವರು, ಬಿಜೆಪಿ ಸಂಸದರು ಮಾತನಾಡುತ್ತಿಲ್ಲ. ನೀರಾವರಿ ಯೋಜನೆ ಸೇರಿ ಪ್ರಮುಖ ಯೋಜನೆ ಬಗ್ಗೆ ಮಾತನಾಡುತ್ತಿಲ್ಲ. ಪಕ್ಷಪಾತ ಬಿಟ್ಟು ರಾಜ್ಯಕ್ಕೆ ಆಗುವ ಅನ್ಯಾಯ ಖಂಡಿಸಬೇಕಿದೆ. ನಮಗೆ ಮಾತನಾಡಲು ಬಿಡುತ್ತಿಲ್ಲ. ಆಡಳಿತದಲ್ಲಿರುವ ಬಿಜೆಪಿ ನಾಯಕರಾದರೂ ರಾಜ್ಯದ ಬಗ್ಗೆ ಮಾತನಾಡಬೇಕು ಅವರು ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.