ಬೆಳಗಾವಿ,,ಡಿ.12(DaijiworldNews/AK): ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ಅವರನ್ನು ಖುಷಿ ಪಡಿಸಲು ಹೋಗಿ ರೈತರನ್ನು ಬೀದಿಗೆ ತರುವ ಕೆಲಸವನ್ನು ಮಾಡಿದ್ದು, ರಾಜ್ಯ ಸರಕಾರ ಹೊಣೆ ಹೊರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದರು.

ಅವರು ಇಂದು ವಿಧಾನಸೌಧದ ಅಧಿವೇಶನದಲ್ಲಿ ವಕ್ಫ್ ಕುರಿತಂತೆ ಮಾತನಾಡಿದರು. ನಾವೇನೂ ಅಲ್ಪಸಂಖ್ಯಾತರ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿದರು. ವಕ್ಫ್ ವಿಷಯದಲ್ಲಿ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದರು.
8-9-2024ರಲ್ಲಿ ಬಿಜಾಪುರದಲ್ಲಿ ವಕ್ಫ್ ಅದಾಲತ್ ನಡೆಸಲಾಗಿತ್ತು. ಜಿಲ್ಲಾಧಿಕಾರಿಗಳೂ ಇದ್ದ ಸಭೆಯ ನಡಾವಳಿಯಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಸಚಿವರು ಅದಾಲತ್ ನಡೆಸುತ್ತಿದ್ದಾರೆ ಎಂದು ತಿಳಿಸಲಾಗಿತ್ತು. ಅಧಿಕಾರಿಗಳು ಸೂಚಿಸಿದಂತೆ ಕಾರ್ಯ ನಿರ್ವಹಿಸದೆ ಇದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು ಎಂದು ಗಮನ ಸೆಳೆದರು.ಬಿಜೆಪಿ ಸರಕಾರ ಇದ್ದಾಗ ನಾಲ್ಕೂವರೆ ಸಾವಿರ ಎಕರೆ ಭೂಮಿ ಸಂಬಂಧ ರೈತರಿಗೆ ನೋಟಿಸ್ ಕೊಟ್ಟ ಕುರಿತು ಆಡಳಿತ ಪಕ್ಷದ ಸದಸ್ಯರು ತಿಳಿಸಿದ್ದು, ಅದನ್ನು ಅಲ್ಲಗಳೆಯುವುದಿಲ್ಲ; ಆಗ ಮುಖ್ಯಮಂತ್ರಿಗಳಾಗಲೀ, ಯಾವುದೇ ಸಚಿವರಾಗಲೀ ಜಿಲ್ಲೆಗಳಲ್ಲಿ ಅದಾಲತ್ ಮಾಡಿ ರೈತರಿಗೆ ರಾತ್ರೋರಾತ್ರಿ ನೋಟಿಸ್ ಕೊಡಲು ಆದೇಶ ಮಾಡಿರಲಿಲ್ಲ. ಅದು ಅಧಿಕಾರಿಗಳ ಮಟ್ಟದಲ್ಲಿ ಆಗಿತ್ತು ಎಂದು ವಿವರಿಸಿದರು.
ಕೇಂದ್ರ ಸರಕಾರವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಕ್ಫ್ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿದೆ. ಇದಕ್ಕಾಗಿ ಜಂಟಿ ಸಂಸದೀಯ ಸಮಿತಿಯನ್ನೂ ರಚಿಸಿದ್ದಾರೆ. ರಾಜ್ಯದಲ್ಲಿ ಇದೇ ಸಂದರ್ಭದಲ್ಲಿ ವಕ್ಫ್ ವಿಚಾರದಲ್ಲಿ ಹೆಚ್ಚಿನ ಚರ್ಚೆ ನಡೆದಿದೆ ಎಂದು ತಿಳಿಸಿದರು.
ನಮ್ಮ ಪ್ರಮುಖರ ತಂಡವು ಈ ಸಂಬಂಧ ವಕ್ಫ್ ಅಧ್ಯಯನ ಪ್ರವಾಸ ಮಾಡಿದೆ. ಕೆಲವೆಡೆ ಊರಿಗೆ ಊರನ್ನೇ ವಕ್ಫ್ ಎಂದು ನಮೂದಿಸಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಉದಾಹರಣೆ ಸಹಿತ ಹೇಳಿದರು.
ಕಲಂ 11ರಲ್ಲಿ ವಕ್ಫ್ ಎಂದು ನಮೂದಿಸಿದ್ದರಿಂದ ಸಾಲ ಪಡೆಯಲಾಗದ, ಜಮೀನು ಮಾರಾಟ ಮಾಡಲೂ ಆಗದ ಸ್ಥಿತಿ ಇದೆ ಎಂದು ತಿಳಿಸಿದರು. ರಾಜ್ಯದಲ್ಲಿ ರೈತರ ವಿರುದ್ಧ ವಕ್ಫ್ ಬೋರ್ಡ್ ಇದೆ. ಹಿಂದೂಗಳ ವಿರುದ್ಧ ಈ ವಕ್ಫ್ ಮಂಡಳಿ ಇದೆ ಎಂದು ಚರ್ಚೆ ಆಗಲು ಆಡಳಿತ ಪಕ್ಷದ ಸದಸ್ಯರೇ ಕಾರಣ ಎಂದು ಆರೋಪಿಸಿದರು.