ನವದೆಹಲಿ,ಡಿ. 14(DaijiworldNews/TA): ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರ ರಾಜಧಾನಿಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ತಕ್ಷಣ ಚರ್ಚೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅಪರಾಧ ಅಂಕಿಅಂಶಗಳನ್ನು ಉಲ್ಲೇಖಿಸಿ, ಕೇಜ್ರಿವಾಲ್ ಅವರು ದೆಹಲಿಯನ್ನು ಭಾರತ ಮತ್ತು ವಿದೇಶಗಳಲ್ಲಿ "ಅಪರಾಧ ರಾಜಧಾನಿ" ಎಂದು ಗುರುತಿಸಲಾಗುತ್ತಿದೆ ಎಂದು ಹೇಳಿದ್ದಾರೆ.

"ಭಾರತದ 19 ಮೆಟ್ರೋ ನಗರಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ, ಕೊಲೆ ಪ್ರಕರಣಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ ಮತ್ತು ನಗರದಾದ್ಯಂತ ಸುಲಿಗೆ ಗ್ಯಾಂಗ್ಗಳು ಸಕ್ರೀಯವಾಗಿವೆ" ಎಂದು ಕೇಜ್ರಿವಾಲ್ ಪತ್ರದಲ್ಲಿ ತಿಳಿಸಿದ್ದಾರೆ.
ಹಗಲು ಹೊತ್ತಿನಲ್ಲಿ ನಡೆಯುತ್ತಿರುವ ಗುಂಡಿನ ದಾಳಿಗಳು, ಕೊಲೆಗಳು ಮತ್ತು ಅಪಹರಣಗಳ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿ ಅವರು ದೆಹಲಿಯಲ್ಲಿ ಅಪರಾಧಿಗಳು ಇನ್ನು ಮುಂದೆ ಕಾನೂನು ಜಾರಿಗೆ ಹೆದರುವುದಿಲ್ಲ ಎಂದು ಆರೋಪಿಸಿದರು.