ಬೆಳಗಾವಿ, ಡಿ. 14(DaijiworldNews/AK): ನಮ್ಮ ಹೋರಾಟಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ರಾಜು ಕಾಗೆ,ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬಂದಿದ್ದರು. ಒಂದು ವೇಳೆ ನಮ್ಮ ಹೋರಾಟ ಸಂವಿಧಾನ ವಿರೋಧಿಯೇ ಆಗಿದ್ದರೆ, ಅವರ ವಿರುದ್ಧ ಕ್ರಮ ವಹಿಸಿ ಸಚಿವರಿಂದ ರಾಜೀನಾಮೆ ಕೇಳಿ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಿಎಂಗೆ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ನಾವು ನಡೆಸಿದ ಹೋರಾಟದಲ್ಲಿ ಭಾಗಿಯಾದ ಕಾಂಗ್ರೆಸ್ ನಾಯಕರನ್ನು ತಾಕತ್ತಿದ್ದರೆ ಶಾಸಕ ಸ್ಥಾನದಿಂದ ವಜಾಗೊಳಿಸಿ ಎಂದು ಸವಾಲು ಹಾಕಿದರು.
ನಾಲ್ಕು ವರ್ಷಗಳಿಂದ ನಾವು ಶಾಂತಿಯುತವಾಗಿ ಹೋರಾಡಿದ್ದೆವು. ನಮ್ಮ ಸಮಾಜದ ಬಗ್ಗೆ ನಿಮಗೆ ಕಳಕಳಿ ಇರದಿದ್ದರೆ, ಮೀಸಲಾತಿ ಕೊಡಲಾಗದು ಎಂದು ಹೇಳಿ ಪರವಾಗಿಲ್ಲ. ಆದರೆ,ಹೋ ರಾಟವೇ ಸಂವಿಧಾನ ವಿರೋಧಿ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ಹಿಂದಕ್ಕೆ ಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.