ಬೆಳಗಾವಿ, ಡಿ.16(DaijiworldNews/AK):ಕಾಂಗ್ರೆಸ್ ಸರಕಾರವು 2013-18ರಲ್ಲಿ ಒಳಮೀಸಲಾತಿ ವಿಚಾರದಲ್ಲಿ ಚಕಾರವನ್ನೂ ಎತ್ತಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಇಲ್ಲಿನ ಮಾಲಿನಿ ಸಿಟಿ, ಯಡಿಯೂರಪ್ಪ ರಸ್ತೆಯಲ್ಲಿ ಒಳಮೀಸಲಾತಿ ಹಕ್ಕೊತ್ತಾಯ ಕುರಿತು ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
30 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು, ನಾವೂ ಬಡವರಿದ್ದು, ನಮ್ಮ ಮಕ್ಕಳಿಗೂ ಶಿಕ್ಷಣದಲ್ಲಿ ಅವಕಾಶ ಬೇಕು; ಶಿಕ್ಷಣವಂಚಿತರಾಗಬಾರದು ಎಂಬ ಕಳಕಳಿ ನಿಮ್ಮದು. ಶಿಕ್ಷಣ ಪಡೆದ ನಮ್ಮ ಸಮಾಜ ಎತ್ತರಕ್ಕೇರಿ ಗೌರವದಿಂದ ಬಾಳಿ ಬದುಕಬೇಕು ಎಂಬ ಕನಸು ಇವರ ಮುಂದಿದೆ ಎಂದರು. ನಾವು ಈ ಸಮಾಜದಲ್ಲಿ ಹುಟ್ಟಿದ್ದೇ ತಪ್ಪೆಂಬ ಭಾವನೆಯಲ್ಲಿ ಕೆಲವರಿದ್ದಾರೆ. 3 ದಶಕಗಳ ಹೋರಾಟ ನಡೆಯಿತು.
ಸದಾಶಿವ ಆಯೋಗ ರಚನೆಯಾಯಿತು. ಆದರೂ ಸಹ ಆ ಆಯೋಗಕ್ಕೆ ನ್ಯಾಯಬದ್ಧವಾಗಿ ಕಾರ್ಯ ನಿರ್ವಹಿಸಲು ಅಂದಿನ ರಾಜ್ಯ ಸರಕಾರವು ಸವಲತ್ತುಗಳನ್ನು ಕೊಡಲಿಲ್ಲ ಎಂದು ಆಕ್ಷೇಪಿಸಿದರು. ನಿವೃತ್ತ ನ್ಯಾಯಾಧೀಶ ಸದಾಶಿವ ಅವರು ಆಯೋಗಕ್ಕೆ ರಾಜೀನಾಮೆ ಕೊಡುವ ಸಂದರ್ಭ ಸೃಷ್ಟಿ ಆಗಿತ್ತು ಎಂದು ವಿವರ ನೀಡಿದರು. ಆದರೂ ರಾಜ್ಯ ಸರಕಾರ ಎಚ್ಚತ್ತುಕೊಳ್ಳಲಿಲ್ಲ; 2013-18ರಲ್ಲಿ ಒಳಮೀಸಲಾತಿ ವಿಚಾರದಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಚಕಾರವನ್ನೂ ಎತ್ತಲಿಲ್ಲ ಎಂದು ತಿಳಿಸಿದರು.
ಒಳಮೀಸಲಾತಿ ಕೊಡಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯನವರು ಉಲ್ಲೇಖಿಸಿದ್ದರು. ಹಿಂದಿನ ಬಿಜೆಪಿ ಸರಕಾರ ಒಳಮೀಸಲಾತಿಗೆ ಶಿಫಾರಸು ಮಾಡಿ ಕೇಂದ್ರಕ್ಕೆ ಕಳಿಸಿದರೂ ಸಹ ಅದರ ಕುರಿತು ಅಪಪ್ರಚಾರ ಮಾಡುವ ಕೆಲಸ ಆಗಿದೆ ಎಂದು ಆಕ್ಷೇಪಿಸಿದರು. ಬೋವಿ, ಬಣಜಾರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಬಿಂಬಿಸುವ ಕೆಲಸ ಮಾಡಿ, ರಾಜ್ಯದಲ್ಲಿ ಅಶಾಂತಿ ಮೂಡಿಸುವ ಪಿತೂರಿ ಕೂಡ ಹಿಂದಿನ ಅವಧಿಯಲ್ಲಿ ನಡೆದುದನ್ನು ನಾವ್ಯಾರೂ ಮರೆಯಬಾರದು ಎಂದು ತಿಳಿಸಿದರು