ರಾಯ್ಪುರ, (ಛತ್ತೀಸ್ಗಢ), ಡಿ.17(DaijiworldNews/AA): ವ್ಯಕ್ತಿಯೊಬ್ಬ ಜೀವಂತ ಕೋಳಿ ಮರಿ ನುಂಗಿ ಸಾವನ್ನಪ್ಪಿ, ಆತ ನುಂಗಿದ್ದ ಕೋಳಿ ಮರಿ ಬದುಕುಳಿದಿರುವ ವಿಚಿತ್ರ ಘಟನೆ ಛತ್ತೀಸ್ಗಢದ ರಾಯ್ಪುರದಲ್ಲಿ ನಡೆದಿದೆ.

ಚಿಂಡ್ಕಲೋ ಗ್ರಾಮದ ನಿವಾಸಿ ಆನಂದ್ ಯಾದವ್ ಮೃತ ವ್ಯಕ್ತಿ. ಜೀವಂತ ಕೋಳಿ ಮರಿಯನ್ನು ನುಂಗಿದ್ದ ಇವರು ಸ್ನಾನ ಮುಗಿಸಿ ವಾಪಸಾದ ಬಳಿಕ ತಲೆಸುತ್ತು ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಕುಟುಂಬಸ್ಥರು ವೈದ್ಯರಿಗೆ ತಿಳಿಸಿದ್ದಾರೆ.
ಈತನ ಪರೀಕ್ಷೆ ನಡೆಸಿದ ವೈದ್ಯರು ಆನಂದ್ ಸಾವನ್ನಪ್ಪಿರುವುದಾಗಿ ಖಚಿತಪಡಿಸಿದ್ದಾರೆ. ಆದರೆ ಅವರ ಸಾವಿಗೆ ಸ್ವಷ್ಟ ಕಾರಣ ತಿಳಿದುಬಂದಿರಲಿಲ್ಲ. ಮರಣೋತ್ತರ ಪರೀಕ್ಷೆಯ ವೇಳೆ ಆನಂದ್ ಗಂಟಲು ಸೀಳಿದಾಗ ಅವರ ಹೊಟ್ಟೆಯಲ್ಲಿ ಕೋಳಿ ಮರಿ ಜೀವಂತವಾಗಿರುವುದನ್ನು ಕಂಡು ವೈದ್ಯರು ಶಾಕ್ ಆಗಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಈತ ಜೀವಂತ ಕೋಳಿ ಮರಿ ನುಂಗಲು ಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕೋಳಿ ಮರಿಯು ಶ್ವಾಸಕೋಶ ಹಾಗೂ ಆಹಾರದ ಮಾರ್ಗ ಎರಡಕ್ಕೂ ಅಡ್ಡಿಯಾಗುವ ರೀತಿಯಲ್ಲಿ ಸಿಲುಕಿಕೊಂಡಿತ್ತು. 15,000 ಕ್ಕೂ ಹೆಚ್ಚಿನ ಮರಣೋತ್ತರ ಪರೀಕ್ಷೆ ನಡೆಸಿದ್ದರೂ ನನ್ನ ವೃತ್ತಿ ಜೀವನದಲ್ಲಿ ಈ ರೀತಿಯ ಪ್ರಕರಣ ನೋಡಿದ್ದು ಮೊದಲು ಎಂದು ಅವರು ತಿಳಿಸಿದ್ದಾರೆ.
ಆನಂದ್ ದಂಪತಿಗೆ ಮಕ್ಕಳಾಗಿರಲಿಲ್ಲ ಹೀಗಾಗಿ ಹಲವು ಮೌಢ್ಯ ಆಚರಣೆಗಳನ್ನು ಮಾಡುತ್ತಿದ್ದರು. ಈ ಆಚರಣೆಯ ಭಾಗವಾಗಿಯೇ ಕೋಳಿ ಮರಿಯನ್ನೂ ಕೂಡ ನುಂಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.