ಬೆಳಗಾವಿ,ಡಿ.18(DaijiworldNews/AK): ಒಳಮೀಸಲಾತಿಯಲ್ಲಿ ಅಲೆಮಾರಿ ಜನಾಂಗದವರಿಗೂ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಆಗ್ರಹಿಸಿದರು.

ಇಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ ನಮ್ಮ ಸರಕಾರವು ಒಳ ಮೀಸಲಾತಿಯನ್ನು ಕಲ್ಪಿಸಿತ್ತು. ಇವತ್ತು 49ಕ್ಕೂ ಹೆಚ್ಚು ಅಲೆಮಾರಿ ಸಮುದಾಯದವರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಲ್ಲಿ ಬಂದಿದ್ದಾರೆ ಎಂದು ವಿವರಿಸಿದರು.
ಅಲೆಮಾರಿ ಸಮುದಾಯದವರು ಹಿಂದೂ ಧರ್ಮದ ಒಂದು ಅಂಗ. ಅತ್ಯಂತ ಬಡತನ ಇರುವ ಜನಾಂಗವಿದು. ಕೆಲವರಿಗೆ ಖಾಯಂ ವಿಳಾಸವೂ ಇಲ್ಲ; ಕೆಲವರಿಗೆ ಮನೆಯೂ ಇಲ್ಲ. ಊರೂರು ಅಲೆಯುವ ಸಮುದಾಯವಿದು ಎಂದರು.ಅವರಿಗೆ ಒಂದು ನೆಲೆ ಸಿಗಬೇಕು. ಬಿಜೆಪಿ ಅವರೆಲ್ಲರಿಗೂ ಬೆಂಬಲ ನೀಡುತ್ತಿದೆ. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ, ನಮ್ಮ ಸರಕಾರ ಇದ್ದಾಗ ನಿಗಮ ಮಾಡಿ, ಹಣ ನೀಡಿದ್ದೆವು. ನಾವು ಅನುದಾನ ಕೊಟ್ಟದ್ದನ್ನು ಈ ಕಾಂಗ್ರೆಸ್ ಸರಕಾರ ವಾಪಸ್ ಪಡೆದಿದೆ ಎಂದು ಆಕ್ಷೇಪಿಸಿದರು.
ನಾವು ಮಾಡಿದ ನಿಗಮದಲ್ಲಿ ಖರ್ಗೆಯವರು ಅವರಿಗೆ ಬೇಕಾದ, ಅವರ ಪ್ರದೇಶದ ಸಮುದಾಯಕ್ಕೆ ಹಣ ವರ್ಗಾವಣೆ ಮಾಡಿದ್ದಾರೆ. ಇವರು ಐದಾರು ಲಕ್ಷ ಜನರಿದ್ದು, ಬೇರೆ ಸಮುದಾಯಕ್ಕೆ ಸಿಗುವಂತೆ ಮಾಡಿದ್ದಾರೆ; ಅದು ಒಳ್ಳೆಯದಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಈ ಕುರಿತಾಗಿ ನಾವು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಎಲ್ಲೋ ಒಂದು ಕಡೆ ಜಾತಿ ರಾಜಕಾರಣ ಮಾಡುತ್ತಿದ್ದಾರಾ? ಎಂದು ಕೇಳಿದಾಗ, ಡೌಟೇ ಇಲ್ಲ ಎಂದು ಅವರು ಉತ್ತರ ಕೊಟ್ಟರು. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಪಕ್ಷದ ಪ್ರಮುಖರು ಇದ್ದರು.