ಬೆಳಗಾವಿ, ಡಿ.19(DaijiworldNews/AK): ಸಂವಿಧಾನ ಕರ್ತೃ ಬಾಬಾಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ ಕಾಂಗ್ರೆಸ್ಸಿಗರಿಗೆ ಬಾಬಾಸಾಹೇಬರ ಫೋಟೊ ಹಿಡಿಯುವ ಯೋಗ್ಯತೆಯೂ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಆಕ್ಷೇಪಿಸಿದರು.

ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತಾವು ಡಾ. ಅಂಬೇಡ್ಕರ್ ಪರ ಇರುವುದಾಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ? ಅವರ ಫೋಟೊ ಹಿಡಿಯುವ ಅಧಿಕಾರ, ಯೋಗ್ಯತೆ ಇವರಿಗೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದ ಚುನಾವಣೆಯಲ್ಲಿ ಎರಡು ಬಾರಿ ಇಡೀ ಕಾಂಗ್ರೆಸ್ ಪಕ್ಷವೇ ಬಂದು ಅಂಬೇಡ್ಕರರನ್ನು ಸೋಲಿಸಿ ಸಂಭ್ರಮ ಆಚರಿಸಿದ್ದರು; ಪಟಾಕಿ ಹೊಡೆದಿದ್ದರು. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದರು. ಸಂವಿಧಾನ ಬರೆದ ಡಾ. ಅಂಬೇಡ್ಕರರು ತೀರಿಕೊಂಡಾಗ ಆರಡಿ ಮೂರಡಿ ಜಾಗವನ್ನೂ ಕೊಡಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ಸಿನವರು ತೀರಿಕೊಂಡಾಗ ನೆಹರೂರಿಗೆ ದೆಹಲಿಯಲ್ಲಿ ಎಷ್ಟೆಕರೆ ಬೇಕೋ ಅಷ್ಟು ಎಕರೆ ಜಾಗ, ಇಂದಿರಾಗಾಂಧಿ ತೀರಿಕೊಂಡರೆ ಬರ್ಕೊಳ್ಳಿ 10 ಎಕರೆನೋ, 20 ಎಕರೆನೋ, ರಾಜೀವ್ ಗಾಂಧಿ ತೀರಿಕೊಂಡರೆ ಬರ್ಕೊಳ್ಳಿ ಒಂದೈವತ್ತು ಎಕರೆ ಎಂಬ ಸ್ಥಿತಿ ಇತ್ತು. ಆದರೆ, ಡಾ. ಅಂಬೇಡ್ಕರರು ತೀರಿಕೊಂಡಾಗ ಆರಡಿ ಮೂರಡಿ ಜಾಗವನ್ನೂ ಕೊಡದ ಪಾಪಿಗಳು ಈ ಕಾಂಗ್ರೆಸ್ಸಿಗರು ಎಂದು ವಿವರಿಸಿದರು.ಬೇಡಿದರೂ ಜಾಗ ಕೊಡದ ಕಾರಣ ಕೊನೆಗೆ ಅವರ ಅಂತ್ಯಸಂಸ್ಕಾರವನ್ನು ಮಹಾರಾಷ್ಟ್ರದಲ್ಲಿ ನೆರವೇರಿಸಬೇಕಾಯಿತು. ಇದಕ್ಕೆ ಮನೆಹಾಳ ಕಾಂಗ್ರೆಸ್ಸೇ ಕಾರಣ ಎಂದು ಟೀಕಿಸಿದರು.