ಬೆಂಗಳೂರು, ಡಿ.19(DaijiworldNews/AK):ಸಂವಿಧಾನಶಿಲ್ಪಿ ಬಾಬಾಸಾಹೇಬ ಅಂಬೇಡ್ಕರರಿಗೆ ಕಾಂಗ್ರೆಸ್ ಪಕ್ಷವು ನಿರಂತರ ಅವಮಾನ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಖಂಡಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಗೃಹ ಮಂತ್ರಿಗಳಾದ ಅಮಿತ್ ಶಾ ಜೀ ಅವರು ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಹೇಳಿರುವ ಮಾತುಗಳನ್ನು ತಪ್ಪಾಗಿ ಬಿಂಬಿಸಿ, ಅದನ್ನು ವಿಡಿಯೋ ಎಡಿಟಿಂಗ್ ಮಾಡಿಸಿ ಅಮಿತ್ ಶಾ ಜೀ ಅವರ ಬಗ್ಗೆ ತಪ್ಪಾಗಿ ಬಿಂಬಿಸುವ ಷಡ್ಯಂತ್ರ, ಪಿತೂರಿಯನ್ನು ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ. ಅವರಿಗೆ ಗೌರವ ಕೊಡುವ ಕೆಲಸವನ್ನು ಕಾಂಗ್ರೆಸ್ಸಿನವರು ಮಾಡಲೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದಿರಿ. ಸಂವಿಧಾನ ಶಿಲ್ಪಿ ಎಂದು ಮಾತನಾಡುವ ಕಾಂಗ್ರೆಸ್ ಪಕ್ಷದವರು ನಿರಂತರವಾಗಿ ಅವರಿಗೆ ಅವಮಾನ ಮಾಡಿದವರು ಎಂದು ಟೀಕಿಸಿದರು.
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಯೋಗ್ಯತೆಯನ್ನೂ ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿಲ್ಲ.
ಅದರ ಬದಲಾಗಿ ಡಾ. ಅಂಬೇಡ್ಕರರಿಗೆ ಗೌರವ ತರುವ ಕೆಲಸವನ್ನು ಬಿಜೆಪಿ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜೀ, ಅಮಿತ್ ಶಾ ಜೀ ಅವರು ಇಂಥ ಕೆಲಸ ಮಾಡಿದ್ದಾರೆ ಎಂದು ಗಮನ ಸೆಳೆದರು.
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥಗಳಾಗಿ ಅಭಿವೃದ್ಧಿಗೊಳಿಸಿ ಪ್ರಪಂಚಕ್ಕೆ ಗೌರವ ತರುವ ಕೆಲಸವನ್ನು ಮೋದಿಜೀ ಅವರು ಮಾಡಿದ್ದಾರೆ. ಇದನ್ನು ಬಿಟ್ಟು ಕಾಂಗ್ರೆಸ್ಸಿನವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ದೂರಿದರು.