ಬೆಳಗಾವಿ, ಡಿ.19(DaijiworldNews/ AK): ಕಾಂಗ್ರೆಸ್ಸಿಗರಾದ ನೀವು ಇವತ್ತು ನಾಟಕ ಆಡುತ್ತಿದ್ದೀರಿ; ಫ್ರಸ್ಟ್ರೇಡೆಡ್ (ಹತಾಶ) ಆಗಿದ್ದೀರಿ ಎಂದು ಸದನದಲ್ಲಿ ಹೇಳಿದ್ದೇನೆ. ಅವರು ಅವರವರ ಭಾವನೆಗೆ ತಕ್ಕಂತೆ ಭಾವಿಸಿದರೆ ನಾನು ಹೊಣೆಗಾರ ಅಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದರು.

ಇಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದು ಆನ್ ರೆಕಾರ್ಡ್ ಇದೆಯೋ ಅದನ್ನು ತೋರಿಸಲಿ; ಆಮೇಲೆ ಪ್ರತಿಕ್ರಿಯೆ ಕೊಡುತ್ತೇನೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸಭಾಪತಿಗಳು ಏನೂ ಕೇಳಿಲ್ಲ; ಇರೋದನ್ನು ಮಾತ್ರ ಆಗ ಹೇಳಬಲ್ಲೆ. ಇಲ್ಲದೆ ಇರುವುದನ್ನು ಕಲ್ಪಿಸಿದರೆ ಅವರವರ ಭಾವನೆಗೆ ತಕ್ಕಂತೆ ಮಾತನಾಡಿದರೆ ನಾನು ಹೇಗೆ ಉತ್ತರ ಕೊಡಲು ಸಾಧ್ಯ ಎಂದು ಕೇಳಿದರು.
ಯಾರು ಏನು ಮಾತನಾಡಿದರು ಎಂಬುದು ಆಡಿಯೋ, ವಿಡಿಯೋದಲ್ಲಿ ದಾಖಲಾಗಿ ಇರುತ್ತದೆ ಎಂದ ಅವರು, ಕಾಂಗ್ರೆಸ್ ಪಕ್ಷ ಡಾ. ಅಂಬೇಡ್ಕರರಿಗೆ ಮಾಡಿದ ಅಪಮಾನವನ್ನು ನಾನು ಪ್ರಸ್ತಾಪಿಸಿದ್ದೇನೆ. ಅವರಿಗೆ ಅನ್ಯಾಯ ಮಾಡಿದ್ದನ್ನು, ಅವರನ್ನು ಸೋಲಿಸಿದ್ದನ್ನು ಹೇಳಿದ್ದೇನೆ ಎಂದು ವಿವರಿಸಿದರು.
ಸತ್ತಾಗ ಅಪಮಾನ ಮಾಡಿದ ಕುರಿತು ಹೇಳಿದ್ದೇನೆ. ದೆಹಲಿಯಲ್ಲಿ ಆರು- ಮೂರಡಿ ಜಾಗ ಕೊಡದ ಕುರಿತು ಹೇಳಿದ್ದೇನೆ. ಸ್ಮಾರಕ ಕಟ್ಟದೇ ಇರುವುದರ ಬಗ್ಗೆ ಹೇಳಿದ್ದೇನೆ. ಭಾರತ ರತ್ನ ಕೊಡದೆ ಇರುವುದರ ಬಗೆಗೆ ಹೇಳಿದ್ದೇನೆ. ನವೆಂಬರ್ 26ರಂದು ಸಂವಿಧಾನದ ಬಗ್ಗೆ ಗೌರವ ತೋರದೆ ಇದ್ದದನ್ನು ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.ಈ ದೇಶದಲ್ಲಿ ಸಂವಿಧಾನ ಇದೆ; ವಿಧಾನಮಂಡಲದ ನಿಯಮಾವಳಿಗಳಿವೆ; ಸಂವಿಧಾನ, ನಿಯಮಾವಳಿ ಮೀರಿದರೆ, ಅವರು ಸಂವಿಧಾನ ವಿರೋಧಿ ಆಗಲು ಸಾಧ್ಯ ಎಂದು ನುಡಿದರು.
ಸಭಾಪತಿಗಳು ಕರೆದರೆ ಭೇಟಿ ಮಾಡುತ್ತೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು. ವಿಧಾನಪರಿಷತ್ತಿನ ಸಭಾಂಗಣದಲ್ಲಿ ಎಂದು ಆರೋಪ ಮಾಡಿದ್ದಾರೆ; ಅಲ್ಲಿ ಆಡಿಯೋ, ವಿಡಿಯೋ ಇರುತ್ತದೋ ಇಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.