ಬೆಂಗಳೂರು, ಡಿ.20(DaijiworldNews/AA): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿಯನ್ನ ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

ಸಿಟಿ ರವಿ ವಿರುದ್ಧ ಎಫ್ಐಆರ್ ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಕ್ಷಣ ಬಿಡುಗಡೆಗೆ ಮಧ್ಯಂತರ ಆದೇಶ ಹೊರಡಿಸಿದೆ. ಜೊತೆಗೆ ತನಿಖೆಗೆ ಸಹಕರಿಸಬೇಕೆಂದು ಸಿ.ಟಿ ರವಿಗೆ ಷರತ್ತು ವಿಧಿಸಿ ತೀರ್ಪು ನೀಡಿದೆ.
ಸಿ.ಟಿ ರವಿ ಅವರು ಜಾಮೀನಿಗಾಗಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಾಳೆ(ಡಿಸೆಂಬರ್ 21) ಮುಂಡೂಡಿತ್ತು. ಆದರೆ ಇದೀಗ ಸಿಟಿ ರವಿಯನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಆದೇಶ ನೀಡುವ ಮೂಲಕ ಹೈಕೋರ್ಟ್ ಅವರಿಗೆ ಬಿಗ್ ರಿಲೀಫ್ ನೀಡಿದೆ.