ದಾವಣಗೆರೆ,ಡಿ.20(DaijiworldNews/AK): ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರಿಗೆ ಮಧ್ಯಂತರ ಜಾಮೀನು ನೀಡಿ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಇದನ್ನು ಬಿಜೆಪಿ ಸ್ವಾಗತಿಸುತ್ತದೆ. ಮಧ್ಯಂತರ ಆದೇಶ ನೀಡುವ ವೇಳೆ ಹೈಕೋರ್ಟ್, ಸಿ.ಟಿ.ರವಿ ಅವರಿಗೆ ನೋಟಿಸ್ ನೀಡದೆ ಬಂಧನ ಮಾಡಿದ್ದು ಕಾನೂನುಬಾಹಿರ ಎಂದು ತಿಳಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿವರಿಸಿದರು.

ದಾವಣಗೆರೆಯ ಸಕ್ರ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಧೋರಣೆಗೆ ಸಚಿವರ ಒತ್ತಡವೇ ಕಾರಣ. ಸಿ.ಟಿ.ರವಿ ಅವರನ್ನು ಬಂಧಿಸಿ ಒಬ್ಬ ಭಯೋತ್ಪಾದಕನಂತೆ ನಡೆಸಿಕೊಂಡಿದ್ದಾರೆ. ಇದು ಅತ್ಯಂತ ಆಘಾತಕರ ವಿಚಾರ ಎಂದು ತಿಳಿಸಿದರು.
ರವಿ ಅವರು ಬಿಜೆಪಿಯ ಹಿರಿಯ ನಾಯಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ಆದರೆ, ಅವರನ್ನು ಒಬ್ಬ ಭಯೋತ್ಪಾದಕ ಎಂಬಂತೆ ನಡೆಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.ರವಿಯವರನ್ನು ಒಂದು ಪಶುವಿನಂತೆ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಇಂಥ ಘಟನೆ ಕರ್ನಾಟಕದ ರಾಜಕೀಯ ಮಾತ್ರವಲ್ಲ; ದೇಶದ ರಾಜಕಾರಣದಲ್ಲಿ ನಡೆದಿಲ್ಲ ಎಂದು ವಿವರಿಸಿದರು.
ಕಾಂಗ್ರೆಸ್ ಸರಕಾರವು ಹಿಟ್ಲರ್ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಈ ಆದೇಶವು ರಾಜ್ಯ ಸರಕಾರಕ್ಕೆ ಏಟು ಕೊಟ್ಟಂತಿದೆ. ರವಿಯವರ ಬಂಧನವನ್ನು ಖಂಡಿಸಿ ಮತ್ತು ಸರಕಾರದ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಕರೆಯಂತೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಿತ್ತು ಎಂದು ತಿಳಿಸಿದರು. ಸುವರ್ಣ ಸೌಧದಲ್ಲಿ ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲು ಮುಂದಾದ ಗೂಂಡಾಗಳನ್ನು ಕೂಡಲೇ ಬಂಧಿಸುವಂತೆ ಅವರು ಆಗ್ರಹಿಸಿದರು.
ವಿಧಾನಸಭೆ, ಪರಿಷತ್ತಿನ ವ್ಯಾಪ್ತಿಯೇ ಬೇರೆ- ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ರಾಜ್ಯಸಭಾ ಸದಸ್ಯನ ಬೆಂಬಲಿಗರು ಹೇಳಿದ್ದರು. ದೇಶದ್ರೋಹ ಮಾಡುವ ಅವರನ್ನು ಕೂಡಲೇ ಬಂಧಿಸಲಿಲ್ಲ; ಅವರನ್ನು ಹಾಗೇ ಬಿಟ್ಟು ನೋಟಿಸ್ ಕಳುಹಿಸಿದ್ದರು. ಅವರನ್ನು ಬಂಧಿಸಿದರೂ ಬಿರಿಯಾನಿ, ಕಬಾಬ್ ನೀಡಿದ್ದರು ಎಂದು ಟೀಕಿಸಿದರು.
ವಿಧಾನಸಭೆ ಮತ್ತು ವಿಧಾನಪರಿಷತ್ತಿನ ವ್ಯಾಪ್ತಿಯೇ ಬೇರೆ ಎಂದು ನಮ್ಮ ವಕೀಲರು ವಾದಿಸುವಾಗ ಹೇಳಿದ್ದಾರೆ. ಇಲ್ಲಿ ನಡೆದಿರುವ ಘಟನೆಗೆ ಯಾರು ಶಿಕ್ಷೆ ಕೊಡಬೇಕು? ಡಿ.ಕೆ.ಶಿವಕುಮಾರ್? ಸಿದ್ದರಾಮಯ್ಯರೇ ಎಂದು ಪ್ರಶ್ನಿಸಿದರು.