ಬೆಂಗಳೂರು,ಡಿ.21(DaijiworldNews/AK): ಇದೇ 19ರ ರಾತ್ರಿ ನನ್ನ ಮೇಲಿನ ಹಲ್ಲೆ ಕುರಿತ ದೂರು ಕೊಟ್ಟೆ, ಎಫ್ಐಆರ್ ಬುಕ್ ಮಾಡಲೇ ಇಲ್ಲ; ಹೋಗಿ ಬಂದು ಫೋನಿನಲ್ಲಿ ಮಾತನಾಡುತ್ತಿದ್ದರು. ನನ್ನನ್ನು ಐಸೋಲೇಟ್ ಮಾಡಿದರು. ಹೊರಗಡೆ ಸೇಫಾಗಿ ಕರೆದುಕೊಂಡು ಹೋಗುವುದಾಗಿ ಹೇಳಿ ಎತ್ತಿಕೊಂಡು ಪೊಲೀಸ್ ಸ್ಕಾರ್ಪಿಯೊದಲ್ಲಿ ತುಂಬಿದರು. ಆಗ ಲಾಠಿಯಿಂದ ಹೊಡೆತ ಬಿತ್ತೋ ಹೇಗಾಯಿತೋ ಗೊತ್ತಿಲ್ಲ; ರಕ್ತ ಬರಲಾರಂಭಿಸಿತ್ತು. ಆಗ ರಾತ್ರಿ 11.45 ಸಮಯ ಇರಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿಂದ ನಂದಗಡ, ಕಿತ್ತೂರಿಗೆ ಕರೆದೊಯ್ದರು. ಕುಡಿಯಲು ನೀರು ಕೊಡಿ ಎಂದರೆ, ವಾಂತಿ ಆಗುವಂತಿದೆ ಎಂದು ತಿಳಿಸಿದರೆ ವಾಹನದಲ್ಲಿ ನೀರೇ ಇರಲಿಲ್ಲ. ಫೋನ್ ಮೂಲಕ ನಿರ್ದೇಶನದಂತೆ ಕಿತ್ತೂರು, ಒಳಗೆ ಗಲ್ಲಿ ರಸ್ತೆಗೆ ಒಯ್ದರು. ಹಿಂದೆ ಬರುತ್ತಿದ್ದ ಮಾಧ್ಯಮಗಳ ವಾಹನ, ನನ್ನ ಪಿ.ಎ. ವಾಹನವನ್ನು ಬ್ಯಾರಿಕೇಡ್ ಹಾಕಿ ತಡೆದಿದ್ದರು ಎಂದು ವಿವರ ನೀಡಿದರು.
ವಾಹನ ಬ್ಲಾಕ್ ಮಾಡಲು ಹೇಳುತ್ತಿದ್ದರು. ಬಳಿಕ ಕೇಳಿದರೆ ಬೆಳಗಾವಿ ಕಡೆಗೆ ಎಂದರು. ಆಗ ಧಾರವಾಡ ಹೈಕೋರ್ಟ್ ಕಟ್ಟಡ ಕಾಣಿಸಿತ್ತು. ಕೇಳಿದರೆ ಉತ್ತರ ಸಿಗಲಿಲ್ಲ; ಅರೆಸ್ಟ್ ಕಾರಣ ಕೇಳಿ ಡೋರ್ ತೆಗೆಯಲೆತ್ನಿಸಿದೆ. ಬಲವಂತ ಮಾಡಿದ ಗುರುತುಗಳಿವೆ ಎಂದು ತಿಳಿಸಿದರು. ನಾನು ಆಗ ಪತ್ನಿಗೆ ಲೈವ್ ಲೊಕೇಶನ್ ಹಾಕಿದೆ. ಫೋನ್ ಮಾಡಿದರು. ಗಾಬರಿ ಪಡದಂತೆ ಸಮಾಧಾನ ಮಾಡಿದೆ ಎಂದರು.
ಸವದತ್ತಿ, ರಾಮದುರ್ಗ, ಯಾದವಾಡ, ಕಬ್ಬಿನ ಗದ್ದೆಗಳ ನಡುವೆ ನಿಲ್ಲಿಸಿದ್ದರು. ಹಿಂದೆ, ಮುಂದೆ ಪೊಲೀಸ್ ಜೀಪಿತ್ತು. ಆರರಿಂದ 8 ಜನ ಪೊಲೀಸರಿದ್ದರು. ಇಳಿದುಹೋಗಿ ಫೋನಿನಲ್ಲಿ ಮಾತನಾಡಿದರು. ಮಾಧ್ಯಮದವರು ಬಂದಾಗ ತಡೆದರು. ನಡೆ ನಿಗೂಢ ಎಂದು ಮಾಧ್ಯಮದವರಿಗೆ ತಿಳಿಸಿದೆ. ಇನ್ನೆಲ್ಲಿಗೋ ಕರೆದೊಯ್ದರು. ಮೂತ್ರಕ್ಕೂ ಅವಕಾಶ ಕೊಡಲಿಲ್ಲ. ಡಿವೈಎಸ್ಪಿ ಕಚೇರಿಗೆ ಕರೆದೊಯ್ದಾಗ ಅಲ್ಲಿಗೆ ಕೇಶವ ಪ್ರಸಾದ್ ಸೇರಿಕೊಂಡರು ಎಂದರು.
ಅವರು ಜೋರು ಮಾಡಿದರು. ವಾಶ್ ರೂಂ ಕೆಟ್ಟದಾಗಿತ್ತು. ಕನ್ನಡಿ ನೋಡಿದಾಗ ರಕ್ತ ಗಡ್ಡ, ಮೀಸೆಯಲ್ಲಿ ಅಂಟಿಕೊಂಡಿತ್ತು. ಪೊಲೀಸರು ಸ್ಥಳೀಯ ನರ್ಸ್ ಕರೆಸಿ ಫಸ್ಟ್ ಏಯ್ಡ್ ಮಾಡಿಸಿದರು. 11.45ರಿಂದ 3ರವರೆಗೂ ಚಿಕಿತ್ಸೆ ಕೊಡಲಿಲ್ಲ. ಕುಡಿಯಲು ನೀರಿಲ್ಲ; ವಾಶ್ ರೂಮಿಗೆ ಜಾಗ ಇಲ್ಲ. ಹಳ್ಳಿ ರಸ್ತೆ, ಗದ್ದೆ, ಕಾಡಿನ ರಸ್ತೆಯಲ್ಲಿ ಓಡಾಡಿಸುತ್ತಿದ್ದರು ಎಂದು ತಿಳಿಸಿದರು.