ಬೆಳಗಾವಿ, ಡಿ, 21(DaijiworldNews/AK): ಸಿ.ಟಿ. ರವಿ ಪ್ರಕರಣ ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಘಟನೆ ಆಗಿ ಹೋಗಿದೆ. ಮತ್ತೆ ಅದನ್ನು ಮುಂದುವರಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರು ಇದರಲ್ಲಿ ನನ್ನ ಪಾತ್ರವಿಲ್ಲ. ನಾನು ಅಂತಹ ಹೇಳಿಕೆ ನೀಡಿಲ್ಲ . ಹೀಗಿರುವಾಗ ಅದನ್ನು ಸಾರ್ವಜನಿಕವಾಗಿ ಬೆಳೆಸುವುದರಲ್ಲಿ ಅರ್ಥವಿಲ್ಲ. ದೇಶದಲ್ಲಿ ಇಂಥ ಘಟನೆಗಳು ಹೊಸದಲ್ಲ. ಸಂಸತ್ ಮತ್ತು ವಿಧಾನಸಭೆಯಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಕೆಲವು ಪ್ರಸಂಗಗಳಲ್ಲಿ ಕ್ಷಮೆ ಕೇಳಿದ ಬಳಿಕ ಮುಗಿದು ಹೋಗಿವೆ ಎಂದರು.
ಕೆಲವು ಘಟನೆಗಳು ಹಾಗೆಯೇ ಮುಚ್ಚಿ ಹೋಗಿವೆ. ಹೀಗಾಗಿ ಈ ಪ್ರಕರಣವನ್ನು ಈಗಲೇ ಮುಗಿಸುವುದು ಒಳ್ಳೆಯದು. ಸಾರ್ವಜನಿಕವಾಗಿ ಈ ಪ್ರಕರಣ ಮುಂದುವರಿಸುವುದು ಅನವಶ್ಯಕ ಎಂದರು.
ಸಿ.ಟಿ.ರವಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಖಾನಾಪುರದಿಂದ ಶಿಫ್ಟ್ ಮಾಡಿದ್ದರು. ಯಾರ ನಿರ್ದೇಶನದ ಮೇರೆಗೆ ಅವರನ್ನು ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.