ಬೆಂಗಳೂರು, ಡಿ.24(DaijiworldNews/AK):ರಾಜ್ಯದ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ. ಪಂಚ ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೊಳಿಸಿಲ್ಲ. ಅಧಿಕೃತ ಮತ್ತು ಅನಧಿಕೃತ ತೆರಿಗೆ ಹೇರುತ್ತಿದ್ದಾರೆ. ಅಂಬೇಡ್ಕರರನ್ನು ನಿರಂತರವಾಗಿ ಅಪಮಾನ ಮಾಡಿದ್ದ ಕಾಂಗ್ರೆಸ್ಸಿಗರಿಗೆ ಅವರ ಹೆಸರು ಹೇಳುವ ನೈತಿಕ ಹಕ್ಕೇ ಇಲ್ಲ ಎಂದು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಾ.ಪಿ.ಸುಧಾಕರ ರೆಡ್ಡಿ ಅವರು ಖಂಡಿಸಿದರು.
ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸೋಲಿನ ನಂತರ ಕಾಂಗ್ರೆಸ್ ಪಕ್ಷದವರು ಹತಾಶರಾಗಿದ್ದಾರೆ. ಡಾ. ಅಂಬೇಡ್ಕರರನ್ನು ಲೋಕಸಭಾ ಚುನಾವಣೆಯಲ್ಲಿ 2 ಬಾರಿ ಸೋಲಿಸಿ ಅವಮಾನಿಸಿದ್ದ ಕಾಂಗ್ರೆಸ್ ಪಕ್ಷವು ಇದೀಗ ತಮ್ಮ ನಾಯಕರನ್ನು ಉಳಿಸಿಕೊಳ್ಳಲು ಅದೇ ಬಾಬಾಸಾಹೇಬರ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದೇಶ ವಿಭಜಿಸುವುದನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರರು ವಿರೋಧಿಸಿದ್ದರು. 370ನೇ ವಿಧಿ ಹೇರುವುದನ್ನೂ ಅವರು ವಿರೋಧಿಸಿದ್ದರು. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ದೇಶವನ್ನೇ ಜೈಲಾಗಿ ಪರಿವರ್ತಿಸಿತ್ತು ಎಂದು ಟೀಕಿಸಿದರು. ಈಗ ಕಾಂಗ್ರೆಸ್ ಮುಖಂಡರು ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.