ಬೆಳಗಾವಿ, ಡಿ.24(DaijiworldNews/AA): ಕಾಂಗ್ರೆಸ್ ಶಕ್ತಿ ಏನೆಂಬುದು ನಮಗೂ ತಿಳಿದಿದೆ. ಅಷ್ಟೇ ಅಲ್ಲ ನಮಗಿಂತ ಚೆನ್ನಾಗಿ ಬಿಜೆಪಿಯವರಿಗೂ ಕಾಂಗ್ರೆಸ್ ಶಕ್ತಿಯ ಅರಿವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯ ಬೆಳಗಾವಿ ಚಲೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ಕೆಡಿಸುವ ಪ್ರಯತ್ನ ಮಾಡಲಿ ಆಮೇಲೆ ನೋಡೋಣ. ಕಾಂಗ್ರೆಸ್ ಪಕ್ಷದ ಶಕ್ತಿ ಅವರಿಗೂ ಗೊತ್ತಿದೆ. ನಮಗೂ ಗೊತ್ತಿದೆ. ಮೊದಲು ಐತಿಹಾಸಿಕ ಕಾರ್ಯಕ್ರಮ ಮಾಡುವ ಮೂಲಕ ಇತಿಹಾಸದ ಪುಟ ಸೇರೋಣ. ಬೆಳಗಾವಿಯು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದೆ. ಹೀಗಾಗಿ ನಗರದಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಸಾರ್ವಜನಿಕರು ಈ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದರು.
ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಪಕ್ಷದ ದೃಷ್ಟಿಯಿಂದ ನೋಡಬೇಡಿ. ಕಾಂಗ್ರೆಸ್ ಪಕ್ಷ ಯಾವುದೇ ಕಾರ್ಯಕ್ರಮ ಮಾಡಿದರೂ, ಪಕ್ಷದ ಕಾರ್ಯಕ್ರಮವನ್ನಾಗಿ ಮಾಡುವುದಿಲ್ಲ. ದೇಶದ ಇತಿಹಾಸ ಹಾಗೂ ದೇಶವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎನ್ನುವುದನ್ನು ಗಮನದಲ್ಲಿಟ್ಟು ಕೊಂಡು ಕಾರ್ಯಕ್ರಮ ಮಾಡುತ್ತದೆ. ಹೀಗಾಗಿ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರು ಎಂದು ಎನಿಸಿಕೊಂಡವರು ಈ ಕಾರ್ಯಕ್ರಮಕ್ಕೆ ಬರಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ನಡೆಯುವ ಜಾಗಗಳಿಗೆ ಭೇಟಿ ನೀಡಿ ಪೂರ್ವ ಸಿದ್ಧತೆ ಪರಿಶೀಲಿಸುತ್ತಿದ್ದೇನೆ. ದಿನಾಂಕ 26ರಿಂದ ಅಧಿಕೃತ ಕಾರ್ಯಕ್ರಮ ಆರಂಭವಾಗಲಿದ್ದು, 26ರಂದು ಬೆಳಗ್ಗೆ ಕೆಲವು ಸ್ಥಳಗಳಲ್ಲಿ ಉದ್ಘಾಟನಾ ಕಾರ್ಯಕ್ರಮಗಳಿವೆ. 26ರಂದು ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. 27ರಂದು ಬೆಳಗ್ಗೆ 10.30ಕ್ಕೆ ಸರ್ಕಾರದ ವತಿಯಿಂದ ಸುವರ್ಣಸೌಧ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲಾಗುವುದು. ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಹೇಳಿದರು.