ಚೆನ್ನೈ, ಡಿ.24(DaijiworldNews/AA): ಶ್ರೀಲಂಕಾ ನೌಕಾಪಡೆಯು ತಮಿಳುನಾಡಿನ 17 ಮೀನುಗಾರರನ್ನು ಬಂಧಿಸಿದ್ದು, ಅವರ ಎರಡು ಹಡಗುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಸಿಎಂ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್ ಅವರು, ಡಿಸೆಂಬರ್ 24ರಂದು ರಾಮೇಶ್ವರಂ ಬಂದರು ಪ್ರದೇಶದಲ್ಲಿ 17 ಮೀನುಗಾರರ ಬಂಧನವಾಗಿದೆ. ಇದರಿಂದ ಮೀನುಗಾರರ ಕುಟುಂಬಗಳ ಜೀವನೋಪಾಯಕ್ಕೆ ತೊಡಕಾಗಿದೆ. ಮೀನುಗಾರರ ರಕ್ಷಣೆ ಮತ್ತು ಅವರ ಹಡಗುಗಳ ಬಿಡುಗಡೆಗೆ ಕೇಂದ್ರ ಸರ್ಕಾರವು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ವರ್ಷದಲ್ಲಿ ಸುಮಾರು 530 ಮೀನುಗಾರರನ್ನು ಬಂಧಿಸಲಾಗಿದ್ದು, 71 ದೋಣಿಗಳನ್ನು ಜಪ್ತಿ ಮಾಡಲಾಗಿದೆ. ಮೀನುಗಾರರು ತಮ್ಮ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನೇ ಅವಲಂಬಿಸಿರುತ್ತಾರೆ ಇಂತಹ ಘಟನೆಗಳು ಅವರ ಮನಸ್ಸಿನಲ್ಲಿ ಭಯದ ಭಾವನೆ ಸೃಷ್ಟಿಸಿವೆ ಎಂದು ಅವರು ಆಂತಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಡಿಸೆಂಬರ್ 20ರಂದು 6 ಮಂದಿ ಅಪರಿಚಿತ ಶ್ರೀಲಂಕಾ ಪ್ರಜೆಗಳಿಂದ ನಾಗಪಟ್ಟಣಂ ಜಿಲ್ಲೆಯ ಕೊಡಿಯಕ್ಕರೆ ಮೀನುಗಾರರ ಮೇಲೆ ಎರಡು ಪ್ರತ್ಯೇಕ ದಾಳಿಗಳು ನಡೆದಿದೆ. ಇಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಸೂಕ್ತ ಕ್ರಮವಹಿಸುವಂತೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.