ಬೆಂಗಳೂರು, ಡಿ.27(DaijiworldNews/AK):ಹವ್ಯಕ ಸಮುದಾಯವು ದೇಶದ ಚಿಂತನೆಗೆ ಪೂರಕವಾಗಿ ಬದುಕುತ್ತಿರುವ ಮಾದರಿ ಸಮಾಜ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಡಿಮೆ ಜನಸಂಖ್ಯೆ ಹೊಂದಿದ ಹವ್ಯಕ ಸಮುದಾಯದ ವಿಶಿಷ್ಟ ಸಾಧನೆ ಮತ್ತು ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳ ಕುರಿತು ಮೆಚ್ಚುಗೆ ಸೂಚಿಸಿದರು.
ಸ್ವಾಭಿಮಾನಿ ಹಾಗೂ ಸೌಹಾರ್ದಯುತ ಮಾದರಿ ಬದುಕಿಗೆ ಹೆಸರಾಗಿರುವ ಹವ್ಯಕ ಸಮುದಾಯದ ವಿಶ್ವಮಟ್ಟದ ಸಮ್ಮೇಳನದ ಮೂಲಕ ಸಮುದಾಯದ ವಿಶಿಷ್ಟತೆಯನ್ನು ಜಗತ್ತು ನೋಡುವಂತಾಗಿದೆ. ಈ ಸಮುದಾಯವನ್ನು ಸಂಘಟಿತ ಮಾರ್ಗದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಸಮ್ಮೇಳನ ಯಶಸ್ವಿಯಾಗಲೆಂದು ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಮಂತ್ರಾಲಯದ ಪರಮಪೂಜ್ಯ ಸುಬುಧೇಂದ್ರ ತೀರ್ಥ ಶ್ರೀಗಳು, ಪರಮಪೂಜ್ಯ ಯತಿರಾಜ ಜೀ ಶ್ರೀಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣ್, ವಿಶ್ವವಾಣಿ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್, ಖ್ಯಾತ ವಕೀಲ ಅಶೋಕ್ ಹಾರನಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ, ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ್ ಕಜೆ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.