ನವದೆಹಲಿ, ಡಿ.28(DaijiworldNews/AA): ನನ್ನ ತಂದೆ ನಿಧನರಾದಾಗ ಕಾಂಗ್ರೆಸ್ ಸಿಡಬ್ಲ್ಯೂಸಿ ಕರೆದು ಸಂತಾಪ ಸೂಚಕ ಸಭೆ ನಡೆಸಲಿಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ತನ್ನ ತಂದೆ ಆಗಸ್ಟ್ 2020ರಲ್ಲಿ ನಿಧನರಾದಾಗ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಸಂತಾಪ ಸೂಚಕ ಸಭೆಯನ್ನು ಕೂಡ ಕರೆಯಲಿಲ್ಲ. ಆ ಸಮಯದಲ್ಲಿ ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ತನ್ನನ್ನು ದಾರಿ ತಪ್ಪಿಸಿದ್ದರು ಎಂದು ಆರೋಪಿಸಿದ್ದಾರೆ.
ಬಾಬಾ ನಿಧನರಾದಾಗ ಕಾಂಗ್ರೆಸ್ ಸಿಡಬ್ಲ್ಯೂಸಿ ಕರೆದು ಸಂತಾಪ ಸೂಚಕ ಸಭೆ ನಡೆಸಲಿಲ್ಲ. ಈ ಬಗ್ಗೆ ಹಿರಿಯ ನಾಯಕರೊಬ್ಬರನ್ನು ಕೇಳಿದಾಗ ರಾಷ್ಟ್ರಪತಿಗಳಿಗೆ ಆ ರೀತಿ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಕೆಆರ್ ನಾರಾಯಣನ್ ಅವರ ನಿಧನದ ನಂತರ ಸಿಡಬ್ಲ್ಯೂಸಿ ಕರೆಯಲಾಗಿತ್ತು ಮತ್ತು ಸಂತಾಪ ಸೂಚಿಸಲಾಗಿತ್ತು ಎಂದು ನನ್ನ ತಂದೆಯ ಡೈರಿಗಳಿಂದ ನನಗೆ ನಂತರ ತಿಳಿಯಿತು. ನನ್ನ ತಂದೆಯವರೇ ಸಂತಾಪ ಸಭೆಯನ್ನು ನಡೆಸಿದ್ದರು ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಭಾರತೀಯ ರಾಷ್ಟ್ರಪತಿಗಳಿಗೆ ಸಂತಾಪ ಸೂಚಿಸುವ ಸಭೆಗಳನ್ನು ನಡೆಸುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೆಯನ್ನು ನೆನಪಿಸಿಕೊಂಡಿರುವ ಅವರು, ಇದು ಅತ್ಯಂತ ಕೀಳು ಮಟ್ಟದ ಧೋರಣೆ. ಆದರೆ, ತನ್ನ ತಂದೆಗೆ ಆದಂತೆ ಬೇರೆ ನಾಯಕರಿಗೂ ಆಗಬಾರದು ಎಂದು ಹೇಳಿರುವ ಅವರು ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕಾಗಿ ಕೇಂದ್ರಕ್ಕೆ ಕಾಂಗ್ರೆಸ್ ಮಾಡಿದ ಮನವಿಗೆ ಬೆಂಬಲ ನೀಡಿದ್ದಾರೆ.