ಬೆಂಗಳೂರು,ಡಿ.28(DaijiworldNews/AK): ಗುತ್ತಿಗೆದಾರ ಸಚಿನ್ ಸಾವಿನ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂದು ತಿಳಿಸಿರುವ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು, ಪ್ರಿಯಾಂಕ ಖರ್ಗೆಯವರು ಮೊದಲು ರಾಜೀನಾಮೆ ಕೊಡಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಮಕ್ಕಳ ದುರ್ಬಳಕೆಯ ಸಂಚು ಸೇರಿದಂತೆ ಅನೇಕ ವಿಷಯಗಳು ಸಚಿನ್ ಡೆತ್ ನೋಟಿನಲ್ಲಿವೆ ಎಂದು ವಿವರಿಸಿದರು.
ತನಿಖೆ ನಡೆಯಲೆಂದು ಮುಂಚಿತವಾಗಿ ತಿಳಿಸಿದರೆ ಬಚಾವ್ ಆಗಬಹುದೆಂದು ಪ್ರಿಯಾಂಕ್ ಅವರು ಪತ್ರಿಕಾಗೋಷ್ಠಿ ಮಾಡಿದ್ದಾರೆ ಎಂದು ಆರೋಪಿಸಿದರು.ಈಶ್ವರಪ್ಪನವರ ರಾಜೀನಾಮೆ ಪಡೆದ ದಾರಿಯಲ್ಲೇ ರಾಜೀನಾಮೆ ಕೊಡಬೇಕು; ನಿಮ್ಮ ಪಾತ್ರ ಏನೂ ಇಲ್ಲ ಎಂದು ಗೊತ್ತಾದರೆ ನೀವು ಮುಖ್ಯಮಂತ್ರಿಯಾದರೂ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.
ನಾವು ಸುಲಭವಾಗಿ ಬಿಡುವುದಿಲ್ಲ; ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಅವರು ಪ್ರಕಟಿಸಿದರು.ವಿಪಕ್ಷ ನಾಯಕರು, ನಮ್ಮ ಕಾರ್ಯಕರ್ತರ ಮೇಲೆ ಸುಲಭವಾಗಿ ಎಫ್ಐಆರ್ ಆಗುತ್ತಿದೆ. ಆದರೆ, ವಿಪಕ್ಷದವರು ಆಡಳಿತ ಪಕ್ಷದವರ ಮೇಲೆ ದೂರು ನೀಡಿದರೆ, ಎಫ್ಐಆರ್ ಆಗುತ್ತಿಲ್ಲ. ಯಾಕೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿ.ಟಿ.ರವಿಯವರು ಕೊಟ್ಟ ದೂರಿನ ಎಫ್ಐಆರ್ ಮಾಡಿಲ್ಲ; ಎಫ್ಐಆರ್ ಮಾಡದೆ ಅವರನ್ನು ರಾತ್ರಿಯೆಲ್ಲ ಸುತ್ತಾಡಿಸಿದ್ದಾರೆ.ಗುಲ್ಬರ್ಗದಲ್ಲಿ ಕೂಡ ಎಫ್ಐಆರ್ ಮಾಡಿಲ್ಲ; ಕೋರ್ಟ್ ನಿರ್ದೇಶನ ನೀಡಬೇಕಾಯಿತು ಎಂದು ಗಮನ ಸೆಳೆದರು.
ನಾಳೆಯೇ ಬಿಜೆಪಿ ಸತ್ಯಶೋಧನಾ ಸಮಿತಿಯು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ತೂಗಾಂವ್ ಕಟ್ಟೆಗೆ ಭೇಟಿ ಕೊಡಲಿದೆ ಎಂದು ರವಿಕುಮಾರ್ ವಿವರ ನೀಡಿದರು.