ಬೆಂಗಳೂರು,ಡಿ.29(DaijiworldNews/TA): ಕ್ರಿಕೆಟ್ ಆಟವನ್ನು ರಾಜಕಾರಣಿಗಳಿಂದ ದೂರವಿಡಬೇಕು. ಈ ಕ್ರೀಡೆಯನ್ನು ಆಟಗಾರರೇ ಮುನ್ನಡೆಸಿಕೊಂಡು ಹೋಗಬೇಕು ಎಂಬುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ತಂಡದ ಮಾಜಿ ಆಟಗಾರ ಸಯ್ಯದ್ ಕಿರ್ಮಾನಿಯವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಆತ್ಮಚರಿತ್ರೆ ʻಸ್ಟಂಪಡ್ – ಲೈಫ್ ಬಿಯಾಂಡ್ ಅಂಡ್ ಬಿಯಾಂಡ್ ದಿ ಟ್ವೆಂಟಿ ಟು ಯಾರ್ಡ್ಸ್ʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ರೀಡಾ ಚಟುವಟಿಕೆಗಳಿಂದ ರಾಜಕಾರಣಿಗಳನ್ನು ದೂರವಿರಿಸಬೇಕು, ಕ್ರೀಡೆಗೆ ಅವರು ಅಪಾಯಕಾರಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಾನೊಬ್ಬ ರಾಜಕಾರಣಿ, ಆದರೂ ಕಿರ್ಮಾನಿ ಅವರು ಈ ಕಾರ್ಯಕ್ರಮಕ್ಕೆ ನನಗೆ ಏಕೆ ಆಹ್ವಾನ ನೀಡಿದರೋ ಗೊತ್ತಿಲ್ಲ ಎಂದು ಹೇಳಿದರು. ಕಿರ್ಮಾನಿಯವರ ಬಗ್ಗೆ ಶ್ಲಾಘಿಸುತ್ತಾ, ಕ್ರೀಡೆ ಪ್ರತಿಭೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಆ ಉನ್ನತ ಸ್ಥಾನವನ್ನು ಉಳಿಸಿಕೊಳ್ಳಲು ಒಳ್ಳೆಯ ಗುಣ ಕಲಿಸಲು ಸಹಾಯ ಮಾಡುತ್ತದೆ. ಕಿರ್ಮಾನಿ ಅವರು ಈ ಎರಡೂ ಗುಣಗಳನ್ನು ಹೊಂದಿದ್ದಾರೆ ಎಂದು ಹೇಳಿದರು.