ನವದೆಹಲಿ, ಡಿ.31(DaijiworldNews/AA): ದೆಹಲಿಯ ಮುಗ್ಧ ಮಕ್ಕಳನ್ನು ಆಮ್ ಆದ್ಮಿ ಪಕ್ಷ ಕೊಳಕು ರಾಜಕಾರಣದಲ್ಲಿ ಬಳಸಿಕೊಂಡಿದೆ. ಈ ಮೂಲಕ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಎಎಪಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಮುಂಬರುವ ದೆಹಲಿ ವಿಧಾನಸಭೆ ಚುನಾವಣೆ ಸಂಬಂಧ ಎಎಪಿ ಬಗ್ಗೆ ಮಕ್ಕಳು ಹೇಳಿರುವ ವಿಡಿಯೋವನ್ನು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಮಕ್ಕಳು 'ಮುಂಬರುವ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಸರ್ಕಾರ ಅಧಿಕಾರಕ್ಕೆ ಬರಲಿದೆ' ಎಂಬ ಹೇಳಿಕೆ ನೀಡಿದ್ದರು. ಜೊತೆಗೆ ಇದನ್ನು ತಡೆಯಲು ಬಿಜೆಪಿಯಿಂದ ಸಾಧ್ಯವೇ ಎಂದು ಬರೆದುಕೊಂಡಿದ್ದರು.
ಕೇಜ್ರಿವಾಲ್ ಅವರ ಈ ಪೋಸ್ಟ್ಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಚುನಾವಣೆಗೆ ಸಂಬಂಧಿಸಿದಂತೆ ಮಕ್ಕಳ ಹೇಳಿಕೆಗಳು, ಅಂತಹ ಚಟುವಟಿಕೆಗಳು ಇರಬಾರದು. ಎರಡನೇದಾಗಿ ಬಾಲಾಪರಾಧಿ ಕಾಯಿದೆ 2015ರ ಉಲ್ಲಂಘನೆಯಾಗಿದೆ. ಆದರೆ ಇದುವರೆಗೂ ಅರವಿಂದ ಕೇಜ್ರಿವಾಲ್ ಮತ್ತು ಅತಿಶಿ ಅವರು ಮಕ್ಕಳ ಹೇಳಿಕೆಯ ಪೋಸ್ಟ್ಗಳನ್ನು ಅಳಸಿಲ್ಲ ಎಂದು ಕಿಡಿ ಕಾರಿದೆ.