ಬೆಂಗಳೂರು, ಜ.01 (DaijiworldNews/AK) :ಸಚಿನ್ ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ 2-3 ಬಾರಿ ಪ್ರಿಯಾಂಕ್ ಖರ್ಗೆಯವರ ಹೆಸರು ಪ್ರಸ್ತಾಪವಾಗಿದೆ. ಜೊತೆಗೆ ಎಫ್ಎಸ್ಎಲ್ ವರದಿಯಲ್ಲೂ ಡೆತ್ ನೋಟ್ ಅಸಲಿ ಎಂದು ದೃಢಪಟ್ಟಿದೆ. ದಾಖಲೆ ಕೊಡಿ ಎಂದರೆ ಇನ್ನೇನು ದಾಖಲೆ ಬೇಕು ನಿಮಗೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಾಖಲೆ ಇಲ್ಲದ ಕಾರಣ ಸಚಿವ ಸ್ಥಾನದಿಂದ ಕೈಬಿಡುವ ವಿಚಾರ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಮುಖ್ಯಮಂತ್ರಿಗಳೇ ಇದು ನಮಗೆ ಮೊದಲೇ ಗೊತ್ತಿದೆ. ನಿಮಗೆ ಧೈರ್ಯ ಇಲ್ಲ ಎಂಬುದು ನಮಗೆ ಗೊತ್ತಿದೆ ಎಂದು ಟೀಕಿಸಿದರು.
ಆ ಸಚಿವರ ತಂದೆಯವರು ಎಐಸಿಸಿ ಅಧ್ಯಕ್ಷರು. ನೀವು ಇದಕ್ಕೆ ಕೈ ಹಾಕಿದರೆ ಅವರು ನಿಮ್ಮ ಬುಡಕ್ಕೆ ಕೈ ಹಾಕುವ ಭಯ ನಿಮಗಿದೆ ಎಂದು ವಿಶ್ಲೇಷಿಸಿದರು.ನೀವು ಕುರ್ಚಿಗೆ ಅಂಟಿ ಕುಳಿತವರು. ಇಷ್ಟೊತ್ತಿಗೆ ನೀವು ಅವರನ್ನು ವಜಾ ಮಾಡಬೇಕಿತ್ತು. ರಾಜೀನಾಮೆ ಪಡೆಯಬೇಕಾಗಿತ್ತು. ಬೇರೆ ಸರಕಾರವಿದ್ದಾಗ ಸ್ವಲ್ಪ ಬಂದರೂ ಬೀದಿಗಿಳಿದು ಬೆಂಕಿ ಹಚ್ಚುತ್ತೀರಲ್ಲವೇ? ಈಗ ನಿಮ್ಮನ್ನು ತಡೆದೋರ್ಯಾರು ಎಂದು ಕೇಳಿದರು.
ಬೇರೆಯವರಿಗೆ ಒಂದು ನ್ಯಾಯ, ನಿಮಗೆ ಒಂದು ನ್ಯಾಯ ಇದೆಯೇ? ಇಷ್ಟೊತ್ತಿಗೆ ನೀವು ಅವರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು. ನಿಮಗೆ ತಾಕತ್ತಿಲ್ಲವೆಂದು ನೇರವಾಗಿ ಒಪ್ಪಿಕೊಳ್ಳಿ ಎಂದು ಆಗ್ರಹವನ್ನು ಮುಂದಿಟ್ಟರು. ಗೋಡೆ ಮೇಲೆ ದೀಪ ಇಡುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.