ಬೆಂಗಳೂರು, ಜ.02 (DaijiworldNews/AA): ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟೋ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಒಳಗಡೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದು, ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಕೊಂಚ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಸಂಕ್ರಾಂತಿ ಬಳಿಕ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಮಾಡುವ ವಿಚಾರವಾಗಿ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ರಾಜಕೀಯದಲ್ಲಿ ಹೆಚ್ಚು ಅನುಭವ ಇಲ್ಲದ ನಿಖಿಲ್ ಕೈ ಕೆಳಗೆ ಕೆಲಸ ಮಾಡೋಕೆ ಪಕ್ಷದ ಕೆಲ ಹಿರಿಯ ನಾಯಕರಿಗೆ ಇಷ್ಟವಿಲ್ಲ.
ಜೊತೆಗೆ ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಮತ್ತೆ ಕುಟುಂಬ ರಾಜಕೀಯ ಹಣೆಪಟ್ಟಿ ಪಕ್ಷಕ್ಕೆ ಬರಲಿದೆ. ಇದನ್ನ ಹೊರತುಪಡಿಸಿ ಪಕ್ಷ ಸಂಘಟನೆಗೆ ಹೊಸ ಸೂತ್ರವನ್ನ ದೇವೇಗೌಡ, ಕುಮಾರಸ್ವಾಮಿ ಮುಂದೆ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಜಿ.ಟಿ.ದೇವೇಗೌಡ ಅವರಿಗೆ ಜೆಡಿಎಸ್ ಶಾಸಕಾಂಗ ನಾಯಕ ಸ್ಥಾನ, ಬಂಡೆಪ್ಪ ಕಾಶಂಪೂರ್ಗೆ ರಾಜ್ಯಾಧ್ಯಕ್ಷ ಸ್ಥಾನ, ಸುರೇಶ್ ಬಾಬುಗೆ ಕೋರ್ ಕಮಿಟಿ ಅಧ್ಯಕ್ಷ ಸ್ಥಾನ, ನಿಖಿಲ್ ಕುಮಾರಸ್ವಾಮಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಬೇಕೆಂಬ ಹೊಸ ಸೂತ್ರವನ್ನು ಹಿರಿಯರ ಜೆಡಿಎಸ್ ನಾಯಕರು ದಳಪತಿಗಳ ಮುಂದೆ ಇಟ್ಟಿದ್ದಾರೆ. ಇನ್ನು ಈ ಸೂತ್ರವನ್ನು ದಳಪತಿಗಳು ಒಪ್ಪುತ್ತಾರಾ ಅಥವಾ ಕಡೆಗಣಿಸುತ್ತಾರಾ ಎಂದು ಕಾದುನೋಡಬೇಕಿದೆ.