ಬೆಂಗಳೂರು, ಜ.02 (DaijiworldNews/AK): ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾ ಮಾಡಲು ಮುಖ್ಯಮಂತ್ರಿ, ಖರ್ಗೆಜೀ, ರಾಹುಲ್ ಗಾಂಧಿ ಅವರನ್ನು ಮನವಿ ಮಾಡುವುದಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿನ್ ಡೆತ್ ನೋಟ್ ಪ್ರದರ್ಶಿಸಿದರು. ಖರ್ಗೆಜೀ ಎಂದರೆ ಮಲ್ಲಿಕಾರ್ಜುನ ಖರ್ಗೆಯವರು. ಪ್ರಿಯಾಂಕ್ ಖರ್ಗೆ ಅಲ್ಲ ಎಂದು ಇದೇವೇಳೆ ಸ್ಪಷ್ಟಪಡಿಸಿದರು.
ಸಚಿನ್ ಡೆತ್ ನೋಟಿನಲ್ಲಿ ಎಲ್ಲ ವಿವರ ಬಂದಿದೆ. ಇದಕ್ಕೆ ಸರಕಾರ ಉತ್ತರಿಸಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡದಿರಿ ಎಂದು ಎಚ್ಚರಿಸಿದರು. ಒಬ್ಬರು ಜೀವತ್ಯಾಗ ಮಾಡಿದ್ದು, ಅವರಿಗೆ ಬೆದರಿಕೆ ಹಾಕಿರುವಾಗ ಅವರಿಗೆ ನ್ಯಾಯ ಬೇಕೇ ಬೇಡವೇ? ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲಿ ಎಂದು ಆಗ್ರಹಿಸಿದರು. ಸಿದ್ದರಾಮಯ್ಯನವರ ಸರಕಾರ ತಪ್ಪು ಮಾಡಿದವರನ್ನು ರಕ್ಷಿಸುತ್ತಿದೆ ಎಂದು ಅವರು ಆರೋಪಿಸಿದರು.
ಪ್ರಿಯಾಂಕ್ ಖರ್ಗೆ ಪರವಾಗಿ ದೆಹಲಿಯಿಂದ ಫೋನ್ ಕರೆಗಳು ಬರುತ್ತಿವೆ. ಅವರ ಪರವಾಗಿ 3 ಜನರು ಮಾತನಾಡಿದ್ದಾರೆ. ಒಂದನೆಯದಾಗಿ ಮುಖ್ಯಮಂತ್ರಿಗಳು ಮಾತನಾಡಿದ್ದು, ಅವರು ಮಾತನಾಡದೆ ಇದ್ದರೆ ಅವರ ಸಿಎಂ ಸ್ಥಾನ ಇರುತ್ತದೆಯೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರು ಯಾವ ರೀತಿ ತೊಂದರೆಯಲ್ಲಿದ್ದಾರೆ ಎಂಬುದು ನಮಗೂ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಉಪ ಮುಖ್ಯಮಂತ್ರಿಗಳು ಮುಂದೆ ಆ ಸ್ಥಾನಕ್ಕೆ ಬರಬೇಕಿದ್ದು ಯಾರನ್ನು ಓಲೈಸಬೇಕೋ ಅದನ್ನು ಮಾಡುತ್ತಿದ್ದಾರೆ. ಗೃಹ ಸಚಿವರಿಗೆ ಇದು ಇಲಾಖೆ ವಿಷಯ. ಇವರು ಮೂವರು ಬಿಟ್ಟರೆ ಇನ್ಯಾರೂ ಮಾತನಾಡಿಲ್ಲ ಎಂದು ತಿಳಿಸಿದರು.ಯಾಕೆ ನೀವೆಲ್ಲ ಸಚಿವರು ಮಾತನಾಡುತ್ತಿಲ್ಲ ಎಂದು ಉಳಿದ ಸಚಿವರನ್ನು ಮೇಲಿಂದ ಕೇಳುತ್ತಿದ್ದಾರೆ; ಅಂದರೆ ದೆಹಲಿಯಿಂದ ಒತ್ತಡ ಬರುತ್ತಿದೆ ಎಂದು ಹೇಳಿದರು.