National
ನಾಲ್ಕು ಸಾರಿಗೆ ನಿಗಮಗಳಲ್ಲಿ ಶೇ. 15 ರಷ್ಟು ದರ ಹೆಚ್ಚಳ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ
- Thu, Jan 02 2025 08:33:54 PM
-
ಬೆಂಗಳೂರು, ಜ.02 (DaijiworldNews/AK): ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮಗಳ ಪ್ರಯಾಣದರ ಶೇ 15ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ದರವು ಜನವರಿ 5 ರಿಂದ ಜಾರಿಗೆ ಬರಲಿದೆ.
ಸಚಿವ ಸಂಪುಟದ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಎಚ್ ಕೆ ಪಾಟೀಲ್ ಅವರು ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.
ಪ್ರತಿ ಲೀಟರ್ ಡೀಸೆಲ್ ಗೆ 10-1-2015ರಲ್ಲಿ ಬಿಎಂಟಿಸಿ ಗೆ ಹತ್ತು ವರ್ಷಗಳ ಹಿಂದೆ ದರ ಪರಿಷ್ಕರಣೆ ಆಗಿತ್ತು. ಅಂದು ರೂ60.98 ಪೈಸೆ ಇತ್ತು. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಅಂದಿನ ಡೀಸೆಲ್ ವೆಚ್ಚ 9 ಕೋಟಿ 16ಲಕ್ಷ ಇದ್ದ್ದು ಈಗ ಪ್ರಸ್ತುತ 13.21ಕೋಟಿ ಹೆಚ್ಚಳ ಆಗಿದೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಂದ ಸಿಬ್ಬಂದಿ ವೆಚ್ಚ 12.85ಕೋಟಿ ಇದ್ದದ್ದು ಪ್ರಸ್ತುತ 18.36 ಕೋಟಿ ಆಗಿದೆ ಪ್ರತಿ ದಿನ 9.56ಕೋಟಿ ಹೆಚ್ಚುವರಿ ಹೊರೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಆಗಿದೆ.
ಎಲ್ಲಾ ಕಾರ್ಪೋರೇಷನ್ ಗಳು, ನಗರ ಬಸ್ಸುಗಳು, ಐಷಾರಾಮಿ ಬಸ್ಸುಗಳು ಸೇರಿದಂತೆ ಎಲ್ಲರಿಗೂ ಶೇ 15% ಪರಿಷ್ಕರಿಸಲಾಗಿದೆ. ಇದರಿಂದ ಪ್ರತಿ ತಿಂಗಳು 74.85 ಕೋಟಿಗಳಷ್ಟು ಆದಾಯ ಹೆಚ್ಚಾಗಲಿದೆ. ಶಕ್ತಿ ಯೋಜನೆಗಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ 5015 ಕೋಟಿಗಳನ್ನು ಮೀಸಲಿರಿಸಿದೆ. ಪ್ರತಿ ತಿಂಗಳು ನಾಲ್ಕೂ ನಿಗಮಗಳಿಗೆ 417.92 ಕೋಟಿ ಗಳ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ. ಕರ್ನಾಟಕ ಅತ್ಯುತ್ತಮ ಆರ್ಥಿಕ ಹೊಣೆಗಾರಿಕೆಯನ್ನು ಅನುಷ್ಠಾನ ಮಾಡಿರುವ ರಾಜ್ಯ ಎಂದು ಸಚಿವರು ತಿಳಿಸಿದರು.ಬಜೆಟ್ ಮಂಡನೆ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಲಿದ್ದಾರೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಮಾಧ್ಯಮದವರಿಗೆ ತಿಳಿಸಿದರು.
ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನವನ್ನು ವಿನಿಯೋಗಿಸಲು ಆಡಳಿತಾತ್ಮಕ ಅನುಮೋದನೆ
ಭಾರತ ಸರ್ಕಾರದ ಆರ್ಥಿಕ ಸಚಿವಾಲಯವು ವಿಶೇಷ ಬಂಡವಾಳ ನೆರವಿನ ಯೋಜನೆಯ ಭಾಗ 7 (ಎ) ಅಡಿ ಕರ್ನಾಟಕದ ರಾಜ್ಯಕ್ಕೆ ಬಂಡವಾಳ ವೆಚ್ಚಕ್ಕಾಗಿ ದೀರ್ಘಾವಧಿ ಸಾಲದ ರೂಪದಲ್ಲಿ ನೀಡಿರುವ 137.85 ಕೋಟಿಗಳ ಅನುದಾನವನ್ನು ವಿನಿಯೋಗಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಸಾಮರ್ಥ್ಯ ಹಾಗೂ ವಿಶ್ವಾಸಾರ್ಹತೆಯ ಹಿನ್ನೆಲೆಯಲ್ಲಿ ಸಾಲವನ್ನು ಪಡೆಯಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು. ಜನಕಲ್ಯಾಣದ ಜೊತೆಗೆ ಅಭಿವೃದ್ದಿ ಗಮನದಲ್ಲಿದೆ ಹಾಗೂ ಹೊರೆಯನ್ನು ಸರಿದೂಗಿಸುವ ವ್ಯವಹಾರಿಕತೆಯ ಹಿನ್ನೆಲೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆಯವರು ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಸಮಾಪನಗೊಳಿಸುವ ಬಗ್ಗೆ ರಾಜ್ಯ ಸಚಿವ ಸಂಪುಟ ಎಂದು ನಿರ್ಣಯ ತೆಗೆದುಕೊಂಡಿದೆ.ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 2022-23 23ನೇ ಸಾಲಿನ ಎಸ್ ಸಿ ಪಿ, ಟಿ ಎಸ್ ಪಿ ಯೋಜನೆಗಳ ಇದ್ದಂತಹ 56ಕೋಟಿ 92ಲಕ್ಷ ರೂಪಾಯಿಗಳ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ವಸತಿ ಶಾಲೆಗಳ ಹಾಗೂ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಬೆಡ್ ಶೀಟ್ ಸೊಳ್ಳೆ ಪರದೆಗಳು ಟ್ರ್ಯಾಕ್ ಸೂಟ್ ಮತ್ತು ನೈಟ್ ಡ್ರೆಸ್ ಗಳ ಸಾಮಗ್ರಿಗಳನ್ನು ಪೂರೈಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಆಯವ್ಯಯದಲ್ಲಿ ಘೋಷಣೆಯಾಗಿರುವಂತೆ ಬಾಡಿಗೆ ಮತ್ತು ಶಿಥಿಲಾವಸ್ಥೆಯಲ್ಲಿ ಇರುವಂತಹ ಕಟ್ಟಡಗಳ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವಂತಹ 200 ಪಶು ವೈದ್ಯ ಸಂಸ್ಥೆಗಳಿಗೆ ಒಂದು ನೂರು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಬಾರ್ಡ್ ಸಹಾಯ ಅನುದಾನದೊಂದಿಗೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಕಾನೂನು ಮಾಪನ ಶಾಸನ ಇಲಾಖೆ 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಲ್ಲಿ ರಾಜ್ಯದ ರೈತರಿಂದ ಭತ್ತ ಮತ್ತು ಬಿಳಿ ಜೋಳ ಖರೀದಿಸಲು ಅವಶ್ಯವಿರುವಂತಹ 580 ಗ್ರಾಂ ತೂಕದ 15 ಲಕ್ಷ ಸೆಣಬಿನ ಗೋಣಿ ಚೀಲಗಳನ್ನು 10 ಕೋಟಿ 88ಲಕ್ಷ ಗಳ ಅಂದಾಜು ವೆಚ್ಚದಲ್ಲಿ ಆವರ್ತಕನಿಧಿ ಅಡಿಯಲ್ಲಿ ರಾಗಿಯನ್ನು ಖರೀದಿಸಲು ಅವಶ್ಯವಿರುವಂತಹ 775 ಗ್ರಾಂ ತೂಕದ 74.82 ಲಕ್ಷ ಸೆಣಬಿನ ಗೋಣಿ ಚೀಲಗಳನ್ನು ಜೆಮ್ ಪೋರ್ಟಲ್ ಮೂಲಕ ಖರೀದಿಸಲು ಅನುಮೋದನೆ.ಸಾರಿಗೆ ಇಲಾಖೆಯವರು ಮೈಸೂರಿನ ಬನ್ನಿ ಮಂಟಪದಲ್ಲಿ ಆಧುನಿಕ ಬಸ್ ನಿಲ್ದಾಣವನ್ನು 120 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ.
ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಸಚಿವ ಸಂಪುಟ ಒಪ್ಪಿಗೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಕರ್ನಾಟಕ ಸಾಂಸ್ಕೃತಿ ಕೇಂದ್ರವಾಗಿದೆ. ಮೂರು ಜ್ಞಾನಪೀಠ ಪ್ರಶಸ್ತಿಯವರ ಊರು ಧಾರವಾಡ ವಿದ್ಯಾಕಾಶಿ ಎಂದು ಪ್ರಖ್ಯಾತಿ ಗಳಿಸಿದೆ.
ಬಂದರು ನಿರ್ಮಾಣಕ್ಕೆ ಅನುಮೋದನೆ
ಕೇಂದ್ರ ಪುರಸ್ಕೃತ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿನ ಮೀನುಗಾರಿಕೆ ಬಂದರು ನಿರ್ಮಾಣ ಕಾಮಗಾರಿಯ 209.13 ಕೋಟಿ ರೂ.ಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಕೇಂದ್ರ ಪುರಸ್ಕೃತ ಯೋಜನೆಯಡಿ ಹಾಲಿ ಇರುವ ಮೀನುಗಾರಿಕೆ ಬಂದರುಗಳ ಆಧುನೀಕರಣ ಹಾಗೂಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ನಿರ್ವಹಣಾ ಹೂಳೆತ್ತುವಿಕೆ ಯ ಕಾಮಗಾರಿಗಳ 84.57 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕೆಐಡಿಬಿ ಸಾಲದ ಮಿತಿ 5000 ಕೋಟಿ ರೂ. ಹೆಚ್ಚಳ
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮಿತಿ ಪ್ರಸ್ತುತ ರೂ. 500 ಕೋಟಿ ಗಳಿದ್ದು, ಅದನ್ನು ರೂ. 5000 ಕೋಟಿಗಳಿಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.