ಕಲಬುರ್ಗಿ, ಜ.04 (DaijiworldNews/AK): ರಾಜ್ಯದ ಕಾಂಗ್ರೆಸ್ ಸರಕಾರವು ಗಾಳಿ ಒಂದನ್ನು ಬಿಟ್ಟು ಬೇರೆಲ್ಲದಕ್ಕೂ ತೆರಿಗೆ ಹಾಕಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದರು.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಲಬುರ್ಗಿಯ ಜಗತ್ ಸರ್ಕಲ್ ಬಳಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅವರು ಮಾತನಾಡಿದರು. ಹಾಲು, ಪೆಟ್ರೋಲ್, ಆಲ್ಕೋಹಾಲ್, ಕರೆಂಟ್, ಬಸ್ ಚಾರ್ಜ್- ಸೇರಿ ಎಲ್ಲ ದರಗಳನ್ನು ಹೆಚ್ಚಿಸಿದ್ದಾರೆ ಎಂದು ಆಕ್ಷೇಪಿಸಿದರು.ಸಚಿನ್ ಆತ್ಮಹತ್ಯೆಗೆ ಕಾರಣನಾದ ರಾಜು ಕಪನೂರ್ ಒಬ್ಬ ಗೂಂಡಾ. ಅವನನ್ನು ಕಾಂಗ್ರೆಸ್ಸಿಗರು ಗೂಂಡಾ ಕಾಯಿದೆಯಿಂದ ತೆಗೆಸಿದ್ದಾರೆ. ಈಗ ನಮ್ಮವನಲ್ಲ; ನಮ್ಮವನಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. ಆರೋಪಿಗಳಲ್ಲಿ ಮೊದಲ 3 ಜನ ಕಾಂಗ್ರೆಸ್ಸಿಗರು ಎಂದು ಗಮನ ಸೆಳೆದರು. ಈ ಭ್ರಷ್ಟ, ಆತ್ಮಹತ್ಯೆಗಳಿಗೆ ಕಾರಣವಾಗುವ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಕೊಡಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ ಎಂದು ಅವರು ಪ್ರಕಟಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಪ್ರಿಯಾಂಕ್ ಖರ್ಗೆಯವರು ಸಚಿವರಾಗಲು ಮೆರಿಟ್ ಕೋಟಾ ಇತ್ತೇ ಅಥವಾ ಪೇಮೆಂಟ್ ಕೋಟಾ ಇತ್ತೇ ಎಂದು ಪ್ರಶ್ನಿಸಿದರು. ಇದು ಬಾಬಾಸಾಹೇಬ ಅಂಬೇಡ್ಕರರು ನಮಗೆ ಕೊಟ್ಟ ಸಾಂವಿಧಾನಿಕ ಹಕ್ಕಿನ ದುರುಪಯೋಗ ಎಂದು ಆಕ್ಷೇಪಿಸಿದರು.