ರಾಯ್ಪುರ, ಜ.05 (DaijiworldNews/AA): ಭದ್ರತಾ ಪಡೆ ಹಾಗೂ ಮಾವೋವಾದಿಗಳ ನಡುವೆ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಮಾವೋವಾದಿಗಳ ಜೊತೆಗೆ ಒಬ್ಬ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸಾವನ್ನಪ್ಪಿದ್ದಾರೆ ಎಂದು ಭಾನುವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್ಮಾದ್ನ ಕಾಡಿನಲ್ಲಿ ಶನಿವಾರ ಸಂಜೆ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರು ನಡುವೆ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ದಾಳಿಗೆ ನಾಲ್ವರು ಮಾವೋವಾದಿಗಳು ಬಲಿಯಾಗಿರುವ ಜೊತೆಗೆ ಜಿಲ್ಲಾ ಮೀಸಲು ಗಾರ್ಡ್ನ (ಡಿಆರ್ಜಿ) ಹೆಡ್ ಕಾನ್ಸ್ಟೇಬಲ್ ಸನ್ನು ಕರಮ್ ತೀವ್ರಗಾಯಗೊಂಡು ಮೃತಪಟ್ಟಿದ್ದಾರೆ.
ಶನಿವಾರ ತಡರಾತ್ರಿ ಗುಂಡಿನ ಚಕಮಕಿ ನಿಂತಿದ್ದು, ಸ್ಥಳದಿಂದ ನಾಲ್ವರು ನಕ್ಸಲೀಯರ ಮೃತದೇಹಗಳು, ಎಕೆ-47 ರೈಫಲ್ ಮತ್ತು ಸ್ವಯಂ ಲೋಡಿಂಗ್ ರೈಫಲ್ ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.