ನವದೆಹಲಿ, ಜ.05 (DaijiworldNews/AA): ದೆಹಲಿಯ ಅಭಿವೃದ್ಧಿ ಅತ್ಯಗತ್ಯವಾಗಿದ್ದು, ಅದನ್ನು ಸಾಧಿಸಲು ಬಿಜೆಪಿಗೆ ಮಾತ್ರ ಸಾಧ್ಯ. ಆದರೆ ಅಭಿವೃದ್ಧಿ ಮಾಡದೇ ಆಪ್ ಪಕ್ಷ ಕಳೆದ 10 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ದೆಹಲಿ ಮೆಟ್ರೋದ 4ನೇ ಹಂತ ಜನಕಪುರಿ ಮತ್ತು ಕೃಷ್ಣಾ ಪಾರ್ಕ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಗೆ ಅವಕಾಶ ನೀಡುವಂತೆ ದೆಹಲಿಯ ಜನರನ್ನು ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ. ದೆಹಲಿಯ ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ಆಪ್ ಸರ್ಕಾರಕ್ಕೆ ಅಗತ್ಯವಾದ ದೂರದೃಷ್ಟಿ ಕೊರತೆಯಿದೆ. ಆಪ್ಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೆ ಅದು ದೆಹಲಿಯ ಜನರಿಗೆ ಶಿಕ್ಷೆ ನೀಡಿದಂತೆ. ಈ ಸರ್ಕಾರವು ನೀರಿನ ಕೊರತೆ, ಮಾಲಿನ್ಯ, ಪ್ರತಿ ವರ್ಷ ತುರ್ತು ಪರಿಸ್ಥಿತಿಯನ್ನಾಗಿ ಪರಿವರ್ತಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸದ್ಯ ನಾವು 2025ರಲ್ಲಿದ್ದೇವೆ. 21ನೇ ಶತಮಾನದ 25 ವರ್ಷಗಳು ಕಳೆದಿವೆ. ಅಂದರೆ ಕಾಲು ಶತಮಾನ ಕಳೆದಿವೆ. ಈ ಸಮಯದಲ್ಲಿ, ಬಹುಶಃ ದೆಹಲಿಯಲ್ಲಿ ಎರಡರಿಂದ ಮೂರು ತಲೆಮಾರುಗಳ ಯುವಕರು ಬೆಳೆದಿದ್ದಾರೆ. ಈಗ ಮುಂಬರುವ 25 ವರ್ಷಗಳು ಭಾರತದ ಭವಿಷ್ಯಕ್ಕೆ ಮತ್ತು ದೆಹಲಿಯ ಭವಿಷ್ಯಕ್ಕೆ ಬಹಳ ಮುಖ್ಯವಾಗಿದೆ ಎಂದರು.
ಈ ವರ್ಷ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆದರೆ ಅದಕ್ಕೂ ಮುಂಚೆ ಆಪ್ ಸರ್ಕಾರವು ರಾಷ್ಟ್ರ ರಾಜಧಾನಿಯನ್ನು ಒಂದರ ನಂತರ ಒಂದರಂತೆ ಬಿಕ್ಕಟ್ಟಿಗೆ ತಳ್ಳುತ್ತಿದೆ. ತಮ್ಮ ಆಡಳಿತವನ್ನು ಭ್ರಷ್ಟಾಚಾರ ಮತ್ತು ದುರುಪಯೋಗ ಸರ್ಕಾರವೆಂದು ಬಣ್ಣಿಸಿಕೊಂಡಿದೆ ಎಂದು ತಿಳಿಸಿದರು.