ಬೆಂಗಳೂರು:,ಜ.06 (DaijiworldNews/AK): ಮೈಸೂರಿನ ವಿಮಾನ ನಿಲ್ದಾಣ ವಿಸ್ತರಣೆ, ನೀರಾವರಿ ಕಾಲುವೆ, ಕೆಪಿಟಿಸಿಎಲ್ ಲೈನಿನ ಸಮಸ್ಯೆ ಪರಿಹಾರ ಕುರಿತಂತೆ ತ್ವರಿತ ಕ್ರಮಕ್ಕೆ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿದ್ದೇನೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಿಳಿಸಿದ್ದಾರೆ.

ಮೈಸೂರಿನಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ನಿಂದ ಒಂದು ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಮುಂದಾಗಿದೆ. ಜಮೀನಿನ ಕೊರತೆ ಇದ್ದು, ಈ ಸಂಬಂಧ ಮುಖ್ಯಮಂತ್ರಿಗಳು ಕ್ಯಾಬಿನೆಟ್ ನಿರ್ಧಾರ ಮಾಡಬೇಕೆಂದು ಕೋರಿದ್ದಾಗಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಈ ವಿಷಯಗಳಿಗೆ ಧನಾತ್ಮಕವಾಗಿ ಸ್ಪಂದಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾಗಿ ಹೇಳಿದರು.
ಪ್ರಿನ್ಸೆಸ್ ರಸ್ತೆ ಹೆಸರನ್ನು ಪುನರ್ ನಾಮಕರಣ ಮಾಡುವುದನ್ನು ಖಂಡಿಸುವುದಾಗಿ ಅವರು ತಿಳಿಸಿದರು. ಮಹಾರಾಜರ ತಂಗಿಯ ನೆನಪಿನಲ್ಲಿ ರಸ್ತೆಗೆ ನಾಮಕರಣ ಮಾಡಲಾಗಿದೆ. ಅಲ್ಲಿ ಟಿ.ಬಿ. ಸ್ಯಾನಿಟೋರಿಯಂ ಕೂಡ ನಿರ್ಮಿಸಿದ್ದಾರೆ ಎಂದ ಅವರು, ಆ ವಿಚಾರವಾಗಿ ಸಿಎಂ ಜೊತೆ ಮಾತನಾಡಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಈ ಸಂಬಂಧ ಪ್ರತಿಭಟನೆಗಳು ನಡೆಯುತ್ತಿದ್ದು, ಅದನ್ನು ಮುಂದುವರೆಸುವುದಾಗಿ ಹೇಳಿದರು.
ಹಗರಣಗಳು, ಬೆಲೆ ಏರಿಕೆ ಸರಕಾರಕ್ಕೆ ಕಪ್ಪು ಚುಕ್ಕಿಯಂತಿದೆ. ಅಂಗನವಾಡಿ ಸಿಬ್ಬಂದಿ, ಅನೇಕ ಸರಕಾರಿ ನೌಕರರು, ಶಾಲಾ ನೌಕರರಿಗೆ ವೇತನ ಸಿಗುತ್ತಿಲ್ಲ; ಇದೆಲ್ಲವೂ ಸರಕಾರಕ್ಕೆ ಕಪ್ಪು ಚುಕ್ಕಿಯಂತಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ದುರಾಡಳಿತ ಆಗುವುದನ್ನು ಸರಿಪಡಿಸಬೇಕು ಎಂದು ಜವಾಬ್ದಾರಿಯುತ ವಿಪಕ್ಷ ಸ್ಥಾನದಿಂದ ಒತ್ತಾಯಿಸುವುದಾಗಿ ಹೇಳಿದರು. ಜನರ ಪರವಾಗಿ ಹೋರಾಟ ಮಾಡುವುದಾಗಿ ತಿಳಿಸಿದರು.