ನವದೆಹಲಿ, ಜ.07 (DaijiworldNews/AA): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಿನ್ನೆ ಸಂಜೆ ತನ್ನ ಅಧಿಕೃತ ನಿವಾಸದಿಂದ ತನ್ನನ್ನು ಹೊರಹಾಕಿದೆ. ಈ ಮೂಲಕ ಕೇಂದ್ರ ಸರ್ಕಾರ ನನ್ನ ಅಧಿಕೃತ ನಿವಾಸವನ್ನು 2ನೇ ಬಾರಿಗೆ ಕಿತ್ತುಕೊಂಡಿದೆ ಎಂದು ದೆಹಲಿ ಸಿಎಂ ಅತಿಶಿ ಆರೋಪಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೊದಲು ಕೂಡ ಅತಿಶಿ ಅವರ ಅಧಿಕೃತ ನಿವಾಸದಿಂದ ಅವರ ವಸ್ತುಗಳನ್ನು ಹೊರಗೆ ಹಾಕಲಾಗಿತ್ತು. ಚುನಾಯಿತ ಸರ್ಕಾರದ ಚುನಾಯಿತ ಮುಖ್ಯಮಂತ್ರಿಯನ್ನು ಅಧಿಕೃತ ನಿವಾಸದಿಂದ ಹೊರಗೆ ಹಾಕಿದ ಈ ರೀತಿಯ ಘಟನೆ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹಿಂದೆ ಎಂದಿಗೂ ಸಂಭವಿಸಿಲ್ಲ ಎಂದು ತಿಳಿಸಿದರು.
ಅಧಿಕೃತ ನಿವಾಸದ ಹಂಚಿಕೆ ರದ್ದುಗೊಂಡಿರುವುದರಿಂದ ಮನೆ ಖಾಲಿ ಮಾಡುವಂತೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಅಧಿಕಾರಿಗಳಿಂದ ನಿನ್ನೆ ಸಂಜೆ ಪತ್ರ ಬಂದಿದೆ. ಕೆಲವು ತಿಂಗಳ ಹಿಂದೆ ನಾನು ದೆಹಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನನ್ನ ಅಧಿಕೃತ ನಿವಾಸದಿಂದ ನನ್ನ ವಸ್ತುಗಳನ್ನು ಹೊರಹಾಕಿದ್ದು ನಿಮಗೆ ನೆನಪಿರಬಹುದು. ನಿನ್ನೆ ಸಂಜೆಯೂ ಸಹ ನನ್ನ ಅಧಿಕೃತ ನಿವಾಸದ ಹಂಚಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳಿಂದ ಪತ್ರ ಬಂದಿದ್ದರಿಂದ ಇದೇ ರೀತಿಯ ಘಟನೆ ಸಂಭವಿಸಿದೆ ಎಂದರು.
ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ನಿಂದಿಸಿ ನನ್ನ ಅಧಿಕೃತ ನಿವಾಸದಿಂದ ಹೊರಹಾಕಿದರೆ ದೆಹಲಿಯ ಜನರಿಗಾಗಿ ನಮ್ಮ ಕೆಲಸಕ್ಕೆ ಅಡ್ಡಿಯಾಗುತ್ತದೆ ಎಂದು ಬಿಜೆಪಿ ಭಾವಿಸಿದರೆ ಅದು ತಪ್ಪಾಗುತ್ತದೆ. ನಮ್ಮ ಅಧಿಕೃತ ನಿವಾಸದಿಂದ ನಮ್ಮನ್ನು ತೆಗೆದುಹಾಕಬಹುದು, ಆದರೆ ಜನರ ಹೃದಯದಿಂದ ನಮ್ಮನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಅವರು ಗೊತ್ತಿರಲಿ. ದೆಹಲಿಯ ಜನರು ದೊಡ್ಡ ಹೃದಯವನ್ನು ಹೊಂದಿದ್ದಾರೆ. ನಾನು ಯಾವುದೇ ನಿವಾಸಕ್ಕೆ ಹೋಗಬಹುದು. ಅದೇ ಉತ್ಸಾಹದಿಂದ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.