ನವದೆಹಲಿ, ಜ.07 (DaijiworldNews/AA): ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕವನ್ನು ಸ್ಥಾಪಿಸಲು ದೆಹಲಿಯ "ರಾಷ್ಟ್ರೀಯ ಸ್ಮೃತಿ" ಸಂಕೀರ್ಣದಲ್ಲಿ ಸ್ಥಳವನ್ನು ಮಂಜೂರು ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ.

ಇಂದು ಪ್ರಣಬ್ ಮುಖರ್ಜಿ ಅವರ ಮಗಳು ಶರ್ಮಿಷ್ಠಾ ಅವರು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿಯಿಂದ ಜನವರಿ 1ರಂದು ತಮಗೆ ಬಂದ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ತಮ್ಮ ತಂದೆಯ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡಿರುವ ಅನುಮೋದನೆಯ ಬಗ್ಗೆ ಹಂಚಿಕೊಂಡಿದ್ದಾರೆ.
ತಮ್ಮ ತಂದೆಯ ಸ್ಮಾರಕ ಸ್ಥಾಪನೆಗೆ ಅನುಮೋದನೆ ದೊರೆತ ಹಿನ್ನೆಲೆ ಧನ್ಯವಾದ ತಿಳಿಸಲು ಶರ್ಮಿಷ್ಠಾ ಅವರು ಇಂದು ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನಾವು ಕೇಳದಿದ್ದರೂ ನೀವು ಪರಿಗಣಿಸಿ ಸ್ಮಾರಕ ಮಂಜೂರು ಮಾಡಿರುವುದು ಹೆಚ್ಚು ಸಂತಸ ತಂದಿದೆ. ಪ್ರಧಾನಿಯವರ ಈ ಅನಿರೀಕ್ಷಿತ ನಿರ್ಧಾರದಿಂದ ಮನಸು ತುಂಬಿ ಬಂದಿದೆ. ನನ್ನ ತಂದೆ ರಾಜ್ಯ ಗೌರವಗಳನ್ನು ಕೇಳಬಾರದು, ಅವುಗಳನ್ನು ಸರ್ಕಾರವೇ ನೀಡಬೇಕೆಂದು ಹೇಳುತ್ತಿದ್ದರು. ಅಪ್ಪನ ಸ್ಮರಣೆಯನ್ನು ಗೌರವಿಸಲು ಪಿಎಂ ಮೋದಿ ಅವರು ಇದನ್ನು ಮಾಡಿದ್ದಾರೆ ಎಂದು ನಾವು ಭಾವಿಸುತ್ತೇವೆ. ಅವರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಶರ್ಮಿಷ್ಠಾ ಮುಖರ್ಜಿ ತಿಳಿಸಿದ್ದಾರೆ.