ನವದೆಹಲಿ, ಜ.08 (DaijiworldNews/AA): ಭಯೋತ್ಪಾದನೆ ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವ ಪ್ರಾಯೋಜಕರು ಮತ್ತು ಹಣಕಾಸುದಾರರನ್ನು ಪತ್ತೆ ಹಚ್ಚುವುದು ಹಾಗೂ ಅವರಿಗೆ ಕಠಿಣ ಶಿಕ್ಷೆ ನೀಡುವುದು ಬಹಳ ಮುಖ್ಯ ಎಂದು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ತಿಳಿಸಿದ್ದಾರೆ.

ಕಝಕಿಸ್ತಾನದ ಅಸ್ತಾನಾದಲ್ಲಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದ ತ್ರಿಭೂತಗಳು, ಇದರ ವಿರುದ್ಧ ಹೋರಾಡುವ ತುರ್ತು ಅಗತ್ಯವಿದೆ. ಭಯೋತ್ಪಾದನೆ ಇಂದು ಜಗತ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಜಾಗತಿಕ ಮತ್ತು ರಾಷ್ಟ್ರೀಯ ಶಾಂತಿಗೆ ಬೆದರಿಕೆಯಾಗಿ ಪರಿಣಮಿಸಿದೆ. ಭಯೋತ್ಪಾದನೆ ವಿರುದ್ಧ ನಾವೆಲ್ಲರೂ ತಕ್ಷಣ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನೆ ವಿರುದ್ಧ ಹೋರಾಡಲು ಸಮಗ್ರ ವಿಧಾನದ ಅಗತ್ಯವಿದೆ. ಭಯೋತ್ಪಾದಕರು ಮಾತ್ರ ದುಷ್ಕರ್ಮಿಗಳಲ್ಲ. ಅವರಿಗೆ ಸಹಾಯ ಮಾಡುವ ಸಂಚಾಲಕರು, ಹಣಕಾಸುದಾರರು ಮತ್ತು ಪ್ರಾಯೋಜಕರ ವಿರುದ್ಧ ಜಂಟಿ ಕ್ರಮವಿರಬೇಕು. ಇವರನೆಲ್ಲವನ್ನೂ ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ಚೌಕಟ್ಟಿನ ಸಹಾಯದಿಂದ ಭಯೋತ್ಪಾದನೆಯ ವಿರುದ್ಧ ಬಲವಾದ ಕ್ರಮವನ್ನು Sಅಔ ತೆಗೆದುಕೊಳ್ಳಬಹುದು ಎಂಬ ವಿಶ್ವಾಸವಿದೆ. ಅಸ್ತಾನಾದಲ್ಲಿ ನಡೆದ ಶೃಂಗಸಭೆಯಲ್ಲಿ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದದ ವಿರುದ್ಧ ಜಂಟಿ ಕ್ರಮದ ಕುರಿತು ಚರ್ಚಿಸಲಾಗಿದ್ದು, ಈ ಬಗ್ಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.