ಬೆಂಗಳೂರು, ಜ.11 (DaijiworldNews/AK): ಕಾಂಗ್ರೆಸ್ಸಿಗರ ಮಿಡ್ ನೈಟ್ ಮೀಟಿಂಗ್ ನಡುವೆ ಕರ್ನಾಟಕ ಬಡವಾಗುತ್ತಿದೆ, ಜನರು ಪರಿತಪಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ರೋಶ ಹೊರಹಾಕಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ಕಾನೂನು ಪ್ರಕೋಷ್ಠದ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯನವರು ಹೊರಗಡೆಯಿಂದ ಬಂದವರು ಎಂದು ಆಡಳಿತ ಪಕ್ಷದಲ್ಲಿ ಕೆಲವರಿಗೆ ಅನಿಸಿದೆ. ಒಂದು ಬಾರಿ 5 ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದಾರೆ. ಎರಡನೇ ಬಾರಿಗೆ 2 ವರ್ಷ ಸಿಎಂ ಆಗಿದ್ದು, ಅವರೇ ಅಧಿಕಾರ ಬಿಟ್ಟುಕೊಡಬೇಕೆಂಬ ಚರ್ಚೆ ಈಗ ಕಾಂಗ್ರೆಸ್ಸಿನಲ್ಲಿ ಆರಂಭವಾಗಿದೆ ಎಂದು ವಿವರಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬಹಳ ಮುಕ್ತವಾಗಿ ಮಾತನಾಡಿದ್ದರು. 25 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಮಂತ್ರಿಮಂಡಲದಲ್ಲಿ ತೆಗೆದುಕೊಂಡಿರಲಿಲ್ಲ. ಆಗ ಅವರ ಗುರುಗಳು ‘ಅಧಿಕಾರ ಸಿಗಲಿಲ್ಲ ಅಂದ್ರೆ ಅಧಿಕಾರವನ್ನು ಒದ್ದು ಕಿತ್ಕೋಬೇಕು’ ಎಂದಿದ್ದರಂತೆ; ಆಗ ಡಿ.ಕೆ.ಶಿವಕುಮಾರ್ ಅವರು ಅಧಿಕಾರವನ್ನು ಒದ್ದು ಕಿತ್ಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 25 ವರ್ಷಗಳ ನಂತರ ಸಿದ್ದರಾಮಯ್ಯನವರು ಸಿಎಂ ಆಗಿ 2 ವರ್ಷ ಪೂರೈಸಿದ್ದು, ಅಧಿಕಾರ ಬಿಟ್ಟು ಕೊಡುವರೇ ಇಲ್ಲವೇ ಎಂಬ ಅನುಮಾನ ಅವರಿಗೆ ಕಾಡುತ್ತಿದೆ. ಆದ್ದರಿಂದ ಅವರು ಒದ್ದು ಕಿತ್ಕೊಳ್ಳುವ ವಿಷಯವನ್ನು ನೆನಪು ಮಾಡಿಕೊಂಡಿದ್ದಾರೆ ಎಂದು ನುಡಿದರು.
ಡಿ.ಕೆ.ಶಿವಕುಮಾರ್ ಎಂದರೆ ಹಠವಾದಿಗಳು; ಒದ್ದು ಕಿತ್ಕೊಳ್ಳುವ ವಿಷಯದಲ್ಲಿ ನಿಸ್ಸೀಮರು. ಹಾಗಾಗಿ ಆ ಪ್ರಕ್ರಿಯೆಗೆ ಅವರು ಚಾಲನೆ ನೀಡಿದ್ದಾರೆ. ಒಂದು ಕಡೆ ಸಿದ್ದರಾಮಯ್ಯನವರು ಅವರ ಅವಧಿ ಪೂರ್ಣವಾದರೂ ಬಿಟ್ಟು ಕೊಡಲು ಮನಸ್ಸು ಬರುತ್ತಿಲ್ಲ. ಸಚಿವರ ನೇತೃತ್ವದಲ್ಲಿ ಡಿಕೆ ಶಿವಕುಮಾರ್ ಇಲ್ಲದ ವೇಳೆ ಡಿನ್ನರ್ ಮೀಟಿಂಗ್ ಅವರು ಪ್ರಾರಂಭಿಸಿದ್ದಾರೆ. ಇನ್ನೊಂದೆಡೆ ವಿಳಂಬವಾಗಿ ಮಲಗುವ ಡಿ.ಕೆ.ಶಿವಕುಮಾರ್ ಲೇಟ್ ನೈಟ್ ಮೀಟಿಂಗ್ ಶುರುಮಾಡಿದ್ದಾರೆ ಎಂದು ತಿಳಿಸಿದರು. ಇದು ಸದ್ಯದ ರಾಜಕೀಯ ಪರಿಸ್ಥಿತಿ ಎಂದರು.
ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ಸಿನ ಸರಣಿ ಸಭೆಗಳು ನಡೆಯುತ್ತಿವೆ. ಆಡಳಿತ ಪಕ್ಷದ ಶಾಸಕರ ಡಿನ್ನರ್ ಮೀಟಿಂಗ್, ಮಿಡ್ನೈಟ್ ಮೀಟಿಂಗ್ಗಳ ನಡುವೆ ನಮ್ಮ ಕಾನೂನು ಪ್ರಕೋಷ್ಠದ ಸಭೆ ಆಯೋಜಿಸಿರುವುದು ಬಹಳ ವಿಶೇóಷ ಎಂದರು. ಈ ಸಭೆಗೆ 95 ಜನ ಅಪೇಕ್ಷಿತರಿದ್ದು, 85 ಜನರು ಭಾಗವಹಿಸಿದ್ದಾರೆ. ತಮಗೆಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.