ನವದೆಹಲಿ,ಜ.11 (DaijiworldNews/AK): ದೆಹಲಿ ಸರ್ಕಾರದ ಈಗ ರದ್ದು ಪಡಿಸಿದ ಮದ್ಯ ನೀತಿಯ ಅನುಷ್ಠಾನದಲ್ಲಿನ ಅಕ್ರಮಗಳಿಂದಾಗಿ ಬೊಕ್ಕಸಕ್ಕೆ 2,026 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಬಹಿರಂಗಪಡಿಸಿದೆ.

ಮದ್ಯ ನೀತಿಯಲ್ಲಿ ಬಹಳಷ್ಟು ಲೋಪದೋಷಗಳು ಕಂಡುಬಂದಿದ್ದು, ಪರವಾನಗಿ ನೀಡುವಲ್ಲಿ ನಿಯಮ ಉಲ್ಲಂಘನೆ ಮಾಡಿರುವುದು ವರದಿಯಲ್ಲಿ ಕಂಡುಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಹಿಂದೆ ಕೇಜ್ರಿವಾಲ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ್ದ ಮದ್ಯ ನೀತಿಯು ಉದ್ದೇಶಿತ ಗುರಿ ಸಾಧಿಸುವಲ್ಲಿ ವಿಫಲವಾಗಿದೆ. ಮುಖ್ಯವಾಗಿ ಆಪ್ ನಾಯಕರು ಕಿಕ್ಬ್ಯಾಕ್ ಲಾಭ ಪಡೆದಿದ್ದಾರೆ. ಮದ್ಯ ನೀತಿ ಅನುಷ್ಠಾನಗೊಳಿಸುವಲ್ಲಿ ಅಂದಿನ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನೇತೃತ್ವದ ಸಚಿವರ ಗುಂಪು ತಜ್ಞರ ಸಮಿತಿಯ ಶಿಫಾರಸುಗಳನ್ನು ಕಡೆಗಣಿಸಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ವರದಿಗಳು ತಿಳಿಸಿವೆ.
ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳು ಇಡಿ ಮತ್ತು ಸಿಬಿಐನಿಂದ ತನಿಖೆಗೆ ಕಾರಣವಾಯಿತು. ಆಗಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಸೇರಿದಂತೆ ಹಲವು ಆಪ್ ನಾಯಕರನ್ನು ಬಂಧಿಸಲಾಗಿತ್ತು. ಆದರೆ, ಕಳೆದ ವರ್ಷ ಅವರಿಗೆ ಜಾಮೀನು ನೀಡಲಾಗಿತ್ತು.